Haveri, Devagiri, Govt Enjineering College, Annual Day,  
ಹಾವೇರಿ

ಕೌಶಲದ ಜತೆಗೆ ಸಮಯಪ್ರಜ್ಞೆ ಬೆಳೆಸಿಕೊಳ್ಳಿ; ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ವಾರ್ಷಿಕೋತ್ಸವದಲ್ಲಿ ಡಾ.ಜಿಗಳಿಕೊಪ್ಪ ಸಲಹೆ

ಹಾವೇರಿ: ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬುದು ಅಕ್ಷರಶಃ ಸತ್ಯವಾಗಿದ್ದು, ವಿದ್ಯಾರ್ಥಿಗಳು ಕಾಲೇಜ್ ದಿನಗಳಲ್ಲೇ ಕೌಶಲದ ಜತೆಗೆ ಸಮಯಪಜ್ಞೆ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ನಗರದ ಚರ್ಮರೋಗ ತಜ್ಞ, ರಕ್ಷಾ ಹೆಲ್ತ್ ಕೇರ್ ಚೇರ್ಮನ್ ಡಾ.ರಾಘವೇಂದ್ರ ಜಿಗಳಿಕೊಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಲೇಜ್ ವಾರ್ಷಿಕೋತ್ಸವ ಹಾಗೂ ಅಂತಿ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೌಶಲ ತೀರಾ ಅಗತ್ಯವಾಗಿದ್ದು, ತರಗತಿ ಹಾಗೂ ಪ್ರಾಯೋಗಿಕ ಕಲಿಕೆಯ ಜತೆಯಲ್ಲೇ ಕೌಶಲಗಳನ್ನೂ ರೂಢಿಸಿಕೊಳ್ಳಬೇಕು. ತಮ್ಮ ವೃತ್ತಿಗೆ ಅಗತ್ಯವಿರುವ ಎಲ್ಲ ಕೌಶಲಗಳು ನಿಮ್ಮಲ್ಲಿ ಇದ್ದರೆ ಸುಲಭವಾಗಿ ಉತ್ತಮವಾದ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲ ಡಾ.ಮುನಿರಾಜು ಎಂ. ಕಾಲೇಜ್‌ನ ವಾರ್ಷಿಕ ವರದಿ ವಾಚನ ಮಾಡಿದರು.
ಸಮಾರಂಭದಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಈರಪ್ಪ ಹುನಗುಂದ, ಸಿವಿಲ್ ವಿಭಾಗದ ಡಾ.ವಾಹಿನಿ ಎಂ., ಇಸಿ ವಿಭಾಗದ ಡಾ.ಯಶವಂತಕುಮಾರ ಟಿ.ಆರ್., ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ.ನವೀನ್ ಟಿ.ಎಚ್., ಪ್ರಥಮ ವರ್ಷದ ಸಂಯೋಜಕ ಡಾ.ಕಾಂತರಾಜ ಕೆ.ಪಿ., ರಜಿಸ್ಟ್ರಾರ್ ಜಿ.ಮಂಜುನಾಥ, ಮತ್ತಿತರರು ಭಾಗವಹಿಸಿದ್ದರು.
ನೃತ್ಯ, ಗಾಯನದ ಸಂಭ್ರಮ
ವೇದಿಕೆ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ಸಮೂಹ ನೃತ್ಯ, ಗಾಯನ, ನಾಟಕ ಪ್ರದರ್ಶನ ನೀಡಿ ಗಮನ ಸೆಳೆದರು.