ಹಾವೇರಿ: ರಾಜ್ಯದ ಬಹುತೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು, ಇರುವ ಶಿಕ್ಷಕರಿಗೆ ಮೊಟ್ಟೆ, ತರಕಾರಿ ಹಂಚಿಕೆ, ಇತರ ಕೆಲಸಗಳ ಹೊರೆ ಹೆಚ್ಚಾಗಿದೆ. ಇದರಿಂದ ಶಿಕ್ಷಕರು ನಲುಗಿ ಹೋಗಿದ್ದು ಇದರ ನಡುವೆ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮಾಡಿ ಎಂದು ಒತ್ತಡ ಹೇರುವ ಬದಲು ಮೊದಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಶಿಕ್ಷಕರಿಗೆ ನೆಮ್ಮದಿಯಾಗಿ ಪಾಠ ಮಾಡಲು ಬಿಡಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಣ ಇಲಾಖೆಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರ ಹಾಗೂ ಮುಖ್ಯಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ನಾನು ಶಿಕ್ಷಕನಾಗಿದ್ದಾಗ ವಿದ್ಯಾರ್ಥಿಗಳು ಫೇಲ್ ಆದರೆ, ಪಾಲಕರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಓದಿದವರು ಮಾತ್ರ ಪಾಸಾಗುತ್ತಿದ್ದರು. ಅರ್ಹರು ನೌಕರಿ ಪಡೆಯುತ್ತಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ವಿದ್ಯಾರ್ಥಿಗಳು ಫೇಲಾದರೆ ಶಿಕ್ಷಕರದ್ದೇ ತಪ್ಪು ಎನ್ನುತ್ತಾರೆ ಪಾಲಕರು. ಮೊಟ್ಟೆ, ಊಟ ಕೊಡುವುದರಲ್ಲೇ ಶಿಕ್ಷಕರು ಸುಸ್ತಾಗುತ್ತಿದ್ದಾರೆ. ಪಾಠ ಮಾಡುವುದು ಬಿಟ್ಟು ಬೇರೆಲ್ಲ ಕೆಲಸ ಹೇಳಿದರೆ ಶಿಕ್ಷಕ ನೆಮ್ಮದಿಯಾಗಿ ಹೇಗೆ ಪಾಠ ಮಾಡುತ್ತಾರೆ. ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಇಂತಹ ಅವ್ಯವಸ್ಥೆ ಬದಲಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಫೇಲಾದವರನ್ನು ಪಾಸು ಮಾಡಬಾರದು. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡಬೇಕು ಎಂದರು.
ಇತ್ತೀಚೆಗೆ ಹಳ್ಳಿ ಹಳ್ಳಿಗಳಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ ಆರಂಭವಾಗಿವೆ. ಕನ್ನಡ ಶಾಲೆಗಳಲ್ಲೂ ಇಂಗ್ಲಿಷ್ ಮೀಡಿಯಂ ತೆಗೆಯುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮವೇ ಮರೆಯಾಗುವ ಆತಂಕವಿದೆ. ಕೇರಳದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಶಿಕ್ಷಕರ ಹುದ್ದೆ ಖಾಲಿ ಬಿಡಲ್ಲ. ಹುದ್ದೆ ಖಾಲಿಯಾದರೆ ಒಂದೇ ದಿನದಲ್ಲಿ ನೇಮಿಸುತ್ತಾರೆ. ಒಬ್ಬನೇ ವಿದ್ಯಾರ್ಥಿ ಇದ್ದರೂ ಒಂದು ಕೊಠಡಿಗೆ ಒಬ್ಬ ಶಿಕ್ಷಕರನ್ನು ನೇಮಿಸುತ್ತದೆ. ಹಾಗಾಗಿ, ಕೇರಳದಲ್ಲಿ ಶೇ.100ರಷ್ಟು ಫಲಿತಾಂಶ ಬರುತ್ತದೆ. ನಮ್ಮ ರಾಜ್ಯದಲ್ಲೂ ಎಲ್ಲ ವ್ಯವಸ್ಥೆ ಕೊಡಿ ನಾವೂ 100ರಷ್ಟು ಫಲಿತಾಂಶ ಕೊಡುತ್ತೇವೆ ಎಂದು ಸವಾಲು ಹಾಕಿದರು.
33 ಅಂಕ ಪಡೆದರೆ ಪಾಸು ಎಂಬ ನಿಯಮ ಮಾಡಿದೆ. 20 ಅಂಕ ಆಂತರಿಕ ಅಂಕ ಇದ್ದು, ಬಾಕಿ 13 ಅಂಕ ಪಡೆದರೆ ಸಾಕು ಪಾಸಾಗುತ್ತಾರೆ. 13 ಅಂಕ ಪಡೆದು ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿ ಪಿಯುಸಿ ಹಾಗೂ ಭವಿಷ್ಯದಲ್ಲಿ ಏನು ಸಾಧಿಸಬಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಸರಿಯಾಗಿ ಪಾಠ ಮಾಡುತ್ತಿಲ್ಲ. ಏನೂ ಕಲಿಯದೇ ಪ್ರೌಢಶಾಲೆ ಬಂದು ಪಾಸಾಗಬೇಕು ಎಂದರೆ ಹೇಗೆ ಸಾಧ್ಯ ಎಂದರು.
ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್.ಬಿ.ಆರ್., ಅಪರ ಆಯುಕ್ತ ಈಶ್ವರ ನಾಯಕ ಮಾತನಾಡಿದರು. ಧಾರವಾಡದ ಉಪ ನಿರ್ದೇಶಕ ಗಿರೀಶ ಪದಕಿ, ಡಯಟ್ ಪ್ರಾಚಾರ್ಯ ಝಡ್.ಎಂ.ಖಾಜಿ, ಡಿವೈಪಿಸಿ ನಿರಂಜನ ಮೂರ್ತಿ, ಎಂ.ಆರ್.ಪಾಟೀಲ, ಬಿಇಒಗಳಾದ ಎಂ.ಎಚ್.ಪಾಟೀಲ, ಶ್ಯಾಮಸುಂದರ ಅಡಿಗ, ಎಸ್.ಜಿ.ಕೋಟಿ, ಎಂ.ಎಫ್.ಬಾರ್ಕಿ, ಎಂ.ಬಿ.ಅಂಬಿಗೇರ, ಎನ್.ಶ್ರೀಧರ, ಆರ್.ವಿ.ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಶಾಂತಗಿರಿ, ಕೆಂಚನಗೌಡ್ರ, ಬಿ.ಎಂ.ಬೇವಿನಮರದ, ಆರ್.ಎಚ್.ಬೆಟ್ಟಳ್ಳೇರ, ಎನ್.ಎನ್.ಕುಂದೂರು, ಮತ್ತಿತರರು ಉಪಸ್ಥಿತರಿದ್ದರು.
ಸ್ಪೀಕರ್ ಸ್ಥಾನ ಸುಲಭವಾದದ್ದಲ್ಲ
ದೇಶದಲ್ಲಿ ಎಂಟು ಸಲ ನಿರಂತರವಾಗಿ ವಿಧಾನ ಪರಿಷತ್‌ಗೆ ಆಯ್ಕೆ ಆದ ಏಕೈಕ ವ್ಯಕ್ತಿ ನಾನು. ಮೂರು ಸಲ ಸಭಾಪತಿಯಾಗಿದ್ದೇನೆ. ಇದಕ್ಕೆಲ್ಲ ಕಾರಣ ಶಿಕ್ಷಕರು ನನ್ನ ಮೇಲೆ ಇಟ್ಟಿರುವ ನಂಬಿಕೆ. ಆ ನಂಬಿಕೆಗೆ ನಾನು ಎಂದಿಗೂ ಮೋಸ ಮಾಡುವುದಿಲ್ಲ. ಮೊನ್ನೆ ಸದನದಲ್ಲಿ ಕೆಲ ಶಾಸಕರಿಗೆ ಬೈದಿದ್ದು ನಿಜ. ನನ್ನದು ಮೂಲತಃ ವಿಜಯಪುರ ಜಿಲ್ಲೆ. ಮಾತು ಒರಟು, ಹೃದಯ ಮೃದು. ಯಾಕೆ ಕೆಟ್ಟ ಶಬ್ದ ಬಳಸಿದ್ದೀರಿ ಎಂದರು ಕೆಲವರು. ಒಂದೆರೆಡು ತಾಸು ಆ ಸ್ಥಾನದಲ್ಲಿ ಕುಳಿತು ನೋಡಿ ಆಗ ನಿಮಗೇ ತಿಳಿಯುತ್ತದೆ. ಸದನದಲ್ಲಿ ಸದಸ್ಯರು ಕೈ ಮೇಲೆ ಎತ್ತಿ ಸಭಾಪತಿ ಅನುಮತಿ ಪಡೆದು ಮಾತನಾಡಬೇಕು. ಯಾರೂ ಅದನ್ನು ಪಾಲಿಸುತ್ತಿಲ್ಲ. ಅದಕ್ಕೆ ಕೋಪದಲ್ಲಿ ದನ ಕಾಯೋರು ಅಂದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅರಿತುಕೊಳ್ಳಬೇಕು ಎಂದರು ಬಸವರಾಜ ಹೊರಟ್ಟಿ.
ನಿಮ್ಮ ಸಮಸ್ಯೆಗಳನ್ನು ಬರೆದುಕೊಡಿ
ಶಿಕ್ಷಕರು ನಿಮ್ಮ ಎಲ್ಲ ಸಮಸ್ಯೆಗಳನ್ನು ಪತ್ರದಲ್ಲಿ ಬರೆದುಕೊಡಿ. ಶೀಘ್ರದಲ್ಲೇ ಶಿಕ್ಷಣ ಸಚಿವರು, ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬಹಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೊರಟ್ಟಿ ಹೇಳಿದರು.
ಶಾಲೆಗಳಿಗೆ ಬಿಇಒ, ಡಿಡಿಪಿಐ ಯಾವುದೇ ಅಧಿಕಾರಿ ಭೇಟಿ ನೀಡಿದಾಗ ಮಕ್ಕಳ ಮುಂದೆ ಶಿಕ್ಷಕರನ್ನು ನಿಂದಿಸಬೇಡಿ. ಇದರಿಂದ ಶಿಕ್ಷಕರ ಆತ್ಮಸ್ಥೈರ್ಯ ಕುಗ್ಗುತ್ತದೆ. ಮೊದಲು ಪರಿಶೀಲಿಸಿ, ಕಚೇರಿಯಲ್ಲಿ ಕುಳಿತು ಮಾತನಾಡಿ. ಈ ಕುರಿತು ಸುತ್ತೋಲೆ ಹೊರಡಿಸಲು ಶಿಕ್ಷಣ ಇಲಾಖೆಗೆ ಒತ್ತಾಯಿಸುತ್ತೇನೆ ಎಂದು ಸಂವಾದದ ವೇಳೆ ಬಸವರಾಜ ಹೊರಟ್ಟಿ ಶಿಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ಜಿಲ್ಲೆಯಲ್ಲಿ 29 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಎಸ್ಸೆಸ್ಸೆಲ್ಸಿ ಬೋರ್ಡ್‌ನಿಂದ ಬ್ಲೂ ಪ್ರಿಂಟ್ ಕೊಡಲಾಗುತ್ತದೆ. ಈ ಸಲ ಇಲಾಖೆ ಮಾರ್ಗದರ್ಶನದಂತೆ ಮಿಶನ್ 40 ಅಂಕಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸುವ ನಿಟ್ಟಿನಲ್ಲಿ ಪರಿಶ್ರಮ ಹಾಕಲಾಗುತ್ತಿದೆ.
ಜಿಲ್ಲೆಯಲ್ಲಿ 471 ಹೈಸ್ಕೂಲ್‌ಗಳಿದ್ದು, ಒಟ್ಟು 23,358 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ, ಹಂತ ಹಂತವಾಗಿ ಮಾರ್ಗದರ್ಶನ ಮಾಡಲಾಗುತ್ತಿದೆ. ಕಾಲ ಕಾಲಕ್ಕೆ ಪೂರ್ವಸಿದ್ಧತೆ ಪರೀಕ್ಷೆ ನಡೆಸಿ, ಕಡಿಮೆ ಅಂಕ ಪಡೆದ ಮಕ್ಕಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಉತ್ತೀರ್ಣರಾಗಲು ಒತ್ತು ನೀಡಲಾಗುತ್ತಿದೆ.