ಹಾವೇರಿ: ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳ ತಡೆಗಟ್ಟುವ ಜತೆಗೆ ಜಿಲ್ಲೆಯ ಸಮಗ್ರ ಮಕ್ಕಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ (1098)ಗೆ ಸ್ವಂತ ಕಟ್ಟಡ ಇಲ್ಲದೇ ನಗರದ ಕಟ್ಟಡ ಒಂದರಲ್ಲಿ ಮೂರನೇ ಮಹಡಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ನಿರ್ದಿಷ್ಟ ಶಾಶ್ವತ ಸೂರು ಇಲ್ಲದ ಕಾರಣ ಜನ ನಿತ್ಯ ಈ ಕಚೇರಿ ಹುಡುಕಾಡುವುದೇ ದೊಡ್ಡ ಸಾಹಸವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಾರ್ಯಾಲಯ ಸದ್ಯ ನಗರದ ಮೈಲಾರ ಮಹದೇವಪ್ಪ ವೃತ್ತದ ಬಳಿಯ ಜೆಕೆ ಟಾವರ್ಸ್ ಕಟ್ಟಡದ ಮೂರನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಕಚೇರಿ ಹುಡುಕಿ ಬರುವವರು ಸಾಮಾನ್ಯವಾಗಿ ಮಕ್ಕಳು, ಮಹಿಳೆಯರು, ವೃದ್ದರು. ಮಕ್ಕಳ ಸಮಸ್ಯೆಗಳು, ಇತರ ಪ್ರಕರಣಗಳ ಸಂಬಂಧ ಕಚೇರಿಗೆ ಬರುವವರು ಕಚೇರಿ ಎಲ್ಲಿ ಎಂದು ಹುಡುಕಾಡುವಂತಾಗಿದೆ. ಹೊಸಮನಿ ಸಿದ್ದಪ್ಪ ವೃತ್ತದ ಸಮೀಪ ಇರುವ ಈ ಕಚೇರಿ ಇರುವ ಕಟ್ಟಡದಲ್ಲಿ ಆಟೋಮೊಬೈಲ್, ಎಲೆಕ್ಟ್ರಿಕಲ್, ಪೇಂಟ್, ಇತರ ವಾಣಿಜ್ಯ ಮಳಿಗೆಗಳು ಇದ್ದು, ಇದರ ನಡುವೆ ಮಕ್ಕಳ ರಕ್ಷಣಾ ಘಟಕದ ನಾಮಫಲಕವೂ ಮುಚ್ಚಿ ಹೋಗಿದೆ. ಕಟ್ಟಡದಲ್ಲಿ ಲಿಫ್ಟ್ ಸೌಲಭ್ಯ ಇದೆ ಆದರೂ ಕಚೇರಿ ಹುಡುಕಾಡುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದಾರೆ.
ಮೂರನೇ ಮಹಡಿಯ ಚಿಕ್ಕ ಕಾರ್ಯಾಲಯದಲ್ಲೇ ಮಕ್ಕಳ ರಕ್ಷಣಾಧಿಕಾರಿ ಕಚೇರಿ, ಮಕ್ಕಳ ಸಹಾಯವಾಣಿ ತೆರೆಯಲಾಗಿದೆ. ಇಕ್ಕಟ್ಟಾದ ಸ್ಥಳದಿಂದಾಗಿ ದಾಖಲೆಗಳನ್ನು ಸೂಕ್ತವಾಗಿ ಸಂಗ್ರಹಿಸಿ ಇಡಲು, ಸಿಬ್ಬಂದಿಯ ಕೆಲಸಕ್ಕೂ ಸಮಸ್ಯೆ ಉಂಟಾಗುತ್ತಿದೆ. ಸೂಕ್ತ ಶೌಚಗೃಹ, ಪಾರ್ಕಿಂಗ್, ಇತರ ಮೂಲಸೌಕರ್ಯಗಳು ಇಲ್ಲದೇ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ಜಿಲ್ಲೆಯ ಜನತೆಯಿಂದ ಕೇಳಿ ಬಂದಿದೆ.
ಸಮಸ್ಯೆಗಳ ನಡುವೆ ಉತ್ತಮ ಕಾರ್ಯ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ 12 ಹುದ್ದೆಗಳು ಮಂಜೂರಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿಟ್ಟು 11 ಹುದ್ದೆಗಳು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಮಕ್ಕಳ ಸಹಾಯವಾಣಿಯಲ್ಲಿ 8 ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳ ನಡುವೆಯೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ರಕ್ಷಣೆಗಾಗಿ ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 2023ರಲ್ಲಿ 35, 2024ರಲ್ಲಿ 54 ಹಾಗೂ 2025ರಲ್ಲಿ 50 ಬಾಲ ವಿವಾಹನಗಳನ್ನು ಘಟಕದಿಂದ ತಡೆಗಟ್ಟಲಾಗಿದೆ. ಬಾಲ ಗರ್ಭಿಣಿಯರ ತಡೆ ಹಾಗೂ ಪೋಕ್ಸೋ ಪ್ರಕರಣಗಳ ತಡೆಗಾಗಿ ಶ್ರಮಿಸುತ್ತಿದೆ. ಸುಸಜ್ಜಿತ ಕಟ್ಟಡ, ಖಾಯಂ ಸಿಬ್ಬಂದಿ ನೇಮಕ ಮಾಡಿದರೆ ಮತ್ತಷ್ಟು ಕೆಲಸ ಮಾಡಲು ಸಹಕಾರಿಯಾಗುತ್ತದೆ.
ರಾಣೆಬೆನ್ನೂರಗೆ ಬಾಲಮಂದಿರ ಶಿಫ್ಟ್
ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಂದು ಕಟ್ಟಡವೂ ಇಲ್ಲದ ಕಾರಣಕ್ಕೆ ಅಧಿಕಾರಿಗಳು ಜಿಲ್ಲಾ ಬಾಲಮಂದಿರವನ್ನು ರಾಣೆಬೆನ್ನೂರಿಗೆ ವರ್ಗಾಯಿಸಿದ್ದಾರೆ.
ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಮಕ್ಕಳ ರಕ್ಷಣಾಧಿಕಾರಿ ಕಾರ್ಯಾಲಯ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ ಎಂಬ ಮಾಹಿತಿ ಇದೆ. ಈಗಾಗಲೇ ನಗರದಿಂದ ಅನೇಕ ಕಚೇರಿಗಳು ಹೊರವಲಯಕ್ಕೆ ಹೋಗಿದ್ದರಿಂದ ಸಮಸ್ಯೆಗಳು ಬೆಟ್ಟದಷ್ಟಾಗಿವೆ. ಮಕ್ಕಳ ರಕ್ಷಣೆ ಹೊಣೆ ಹೊತ್ತಿರುವ ಈ ಇಲಾಖೆಗೆ ಭದ್ರತೆ ಕಾರಣಕ್ಕೆ ನಗರದಲ್ಲೇ ಸ್ವಂತ ನಿವೇಶನ ಹುಡುಕಿ, ಶಾಶ್ವತ ಕಟ್ಟಡ ನಿರ್ಮಿಸಬೇಕಿದೆ. ಹಾವೇರಿ ನಗರದಲ್ಲಿ ಒಂದೇ ಸೂರಿನಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಾರ್ಯಾಲಯ, ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಬಾಲಮಂದಿರ ಆರಂಭಿಸಬೇಕು ಎಂಬುದು ‘ವಿಜಯವಾಣಿ’ ಪತ್ರಿಕೆ ಕಳಕಳಿ.
ವಾಲ್ಮೀಕಿ ವೃತ್ತದ ಬಳಿ ಲೋಕೋಪಯೋಗಿ ಇಲಾಖೆ ಕ್ವಾರ್ಟರ್ಸ್‌ನಲ್ಲಿ ಇದ್ದ ಕಟ್ಟಡ ಸೋರುತ್ತಿದ್ದ ಕಾರಣ ಕಳೆದ ವರ್ಷ ಜೆಕೆ ಟಾವರ್ಸ್‌ನ ಬಾಡಿಗೆ ಕಟ್ಟಡಕ್ಕೆ ಹಿಂದಿನ ಅಧಿಕಾರಿಗಳು ಸ್ಥಳಾಂತರಿಸಿದ್ದರು. ನಾನು ಇತ್ತೀಚೆಗೆ ವರ್ಗವಾಗಿ ಇಲ್ಲಿಗೆ ಬಂದಿದ್ದೇನೆ. ಸರ್ಕಾರಿ ಅಥವಾ ಖಾಸಗಿಯ ಪ್ರತ್ಯೇಕ ಕಟ್ಟಡದ ಹುಡುಕಾಟದಲ್ಲಿದ್ದೇವೆ. 2026ರ ಅಂತ್ಯದ ಒಳಗಾಗಿ ಘಟಕಕ್ಕೆ ಸ್ವಂತ ಅಥವಾ ಶಾಶ್ವತ ಸೂರಿನ ವ್ಯವಸ್ಥೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.