Haveri, DC Visits, Water Problems, Area,  
ಹಾವೇರಿ

ಕುಡಿಯುವ ನೀರಿನ ಸೋರಿಕೆ ತಡೆಗಟ್ಟಿ; ನಿಗಧಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ; ಅಧಿಕಾರಿಗಳು, ಗುತ್ತಿಗೆದಾರರಿಗೆ ಡಿಸಿ ಸೂಚನೆ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಹಾವೇರಿ ನಗರದಲ್ಲಿ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು. ನೀರಿನ ಸೋರಿಕೆ ತಡೆಗಟ್ಟಬೇಕು. ನಿಗಧಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನಗರದ ವಿವಿಧ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಡಿಸಿ, ನಗರದ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಅಮೃತ 2.0 ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಪ್ರಗತಿ ಕುರಿತು ಪರಿಶೀಲಿಸಿದರು.
ನಗರದ ನಾಗೇಂದ್ರನಮಟ್ಟಿಯಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಅವರು, ಘಟಕದ ನಿರ್ವಹಣೆ, ನೀರಿನ ಗುಣಮಟ್ಟ ಕಾಪಾಡುವ ಕ್ರಮಗಳು ಹಾಗೂ ವಿತರಣಾ ವ್ಯವಸ್ಥೆಯ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದರು. ಅಮೃತ 2.0 ಯೋಜನೆಯಡಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್‌ಗಳ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ನಾಗೇಂದ್ರನಮಟ್ಟಿ ಹಾಗೂ ಬಸವೇಶ್ವರ ನಗರದಲ್ಲಿ ಕುಡಿಯುವ ನೀರಿನ ವಿತರಣಾ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಚರ್ಚಿಸಿದರು. ಜನರು ಸ್ಥಳೀಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಹಿಂದೆ 15 ದಿನಗಳಿಗೊಮ್ಮೆ ಮಾತ್ರ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಆದರೆ ಈಗ 4ರಿಂದ 5 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ, ನೀರಿನ ಒತ್ತಡ (ಪ್ರೆಶರ್) ಸಮರ್ಪಕವಾಗಿಲ್ಲದ ಕಾರಣ ಕೆಲ ಪ್ರದೇಶಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲು ಮನವಿ ಮಾಡಿದರು. ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ. ಅಗತ್ಯ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಾಗೇಂದ್ರನಮಟ್ಟಿ ಅಂಡರ್‌ಪಾಸ್‌ಗೆ ಭೇಟಿ ನೀಡಿ, ಸ್ವಚ್ಛತೆ ಕಾಪಾಡುವ ಜತೆಗೆ ಮಳೆ ನೀರು ಸರಾಗವಾಗಿ ಹರಿಯಲು ಪಕ್ಕದಲ್ಲಿ ಸೂಕ್ತ ಡ್ರೈನೇಜ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಒಳಚರಂಡಿ ಕಾಮಗಾರಿ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯ ಭವನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿಗಳ ಗುಣಮಟ್ಟ ಕಾಪಾಡುವ ಕುರಿತು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ನಗರಸಭೆ ಎಇಇ ಮಹಮ್ಮದ್ ಸಮೀರ್, ಇತರ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ
ವಾಟರ್‌ಮ್ಯಾನ್‌ಗಳು ಸ್ಥಳೀಯ ಸಾರ್ವಜನಿಕರ ಮೊಬೈಲ್ ಸಂಖ್ಯೆಗಳನ್ನೊಳಗೊಂಡ ವಾಟ್ಸ್ ಆ್ಯಪ್ ಗುಂಪುಗಳನ್ನು ರಚಿಸಬೇಕು. ಈ ಗುಂಪುಗಳ ಮೂಲಕ ನೀರು ಬಿಡುವ ದಿನಾಂಕ, ಸಮಯ ಮುಂಚಿತವಾಗಿ ಹಂಚಿಕೊಳ್ಳಬೇಕು. ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವಂತೆ ಡಿಸಿ ಸಲಹೆ ನೀಡಿದರು. ಇದರಿಂದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಹೇಳಿದರು.
ಹಾಲನ ಕೆರೆ ಸಂರಕ್ಷಿಸಿ
ಹಾಲನ ಕೆರೆಗೆ ಭೇಟಿ ನೀಡಿ ಕೆರೆಯ ಸ್ವಚ್ಛತೆ ಕಾಪಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಸಾರ್ವಜನಿಕ ಜಾಗೃತಿ ದೃಷ್ಟಿಯಿಂದ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದರು.