dog, rescue center 
ಹಾವೇರಿ

ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಾಲನೆ; ಶ್ವಾನಗಳ ಆಶ್ರಯ ಕೇಂದ್ರ ಉದ್ಘಾಟಿಸಿದ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಹಾವೇರಿ ನಗರಸಭೆ ವತಿಯಿಂದ ನಗರದ ಎ.ಪಿ.ಎಂ.ಸಿ ಆವರಣದಲ್ಲಿ ತೆರೆಯಲಾಗಿರುವ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ ಹಾಗೂ ಶ್ವಾನಗಳ ಆಶ್ರಯ ಕೇಂದ್ರವನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಡಿಸಿ, ಮನುಷ್ಯನಿಗೆ ಉತ್ತಮ ಆಹಾರ ಎಷ್ಟು ಮುಖ್ಯವಾಗಿದೆಯೋ, ಹಾಗೆಯೇ ಶ್ವಾನಗಳಿಗೂ ಮೂಲ ಸೌಕರ್ಯ ಮತ್ತು ಗುಣಮಟ್ಟದ ಚಿಕಿತ್ಸೆ ಅವಶ್ಯವಾಗಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಿಲ್ಲೆಯಲ್ಲಿ ವಿಶೇಷವಾಗಿ 10 ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ ಬೀದಿ ನಾಯಿಗಳ ಸಂತಾನ ಹರಣದ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಬ್ಯಾಡಗಿ, ಹಾನಗಲ್ಲ, ಹಾವೇರಿ ಹಾಗೂ ರಾಣೆಬೆನ್ನೂರ ಸೇರಿ ನಾಲ್ಕು ಸ್ಥಳಗಳಲ್ಲಿ ಪ್ರಾರಂಭವಾಗಿದ್ದು, 400ಕ್ಕೂ ಹೆಚ್ಚು ಬೀದಿನಾಯಿಗಳ ಸಂರಕ್ಷಣೆಯನ್ನು ಮಾಡಲಾಗಿದೆ. ಶೀಘ್ರದಲ್ಲೇ ಶಿಗ್ಗಾಂವಿ ಮತ್ತು ಉಳಿದ ತಾಲೂಕುಗಳಲ್ಲಿ ಆರಂಭಿಸಲಾಗುವುದು. ವಿವಿಧ ಸಂಸ್ಥೆಗಳಲ್ಲಿ, ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳ ಆವರಣ, ಆಸ್ಪತ್ರೆ ಆವರಣ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಅವುಗಳನ್ನು ಹಿಡಿದು ಸಂರಕ್ಷಿಸಿ ಉತ್ತಮವಾದ ಶಸ್ತ್ರಚಿಕಿತ್ಸೆ ನೀಡುವುದು ಅವಶ್ಯವಾಗಿದೆ. ಈ ಹಿಂದೆ ಬೀದಿ ನಾಯಿಗಳು ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡಿದ್ದು ವರದಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ, ನಗರಸಭೆ ಆಯುಕ್ತ ಎಚ್. ಕಾಂತರಾಜ, ಇತರರು ಉಪಸ್ಥಿತರಿದ್ದರು.
ಗಮನ ಸೆಳೆದಿದ್ದ ‘ವಿಜಯವಾಣಿ’
ಬೀದಿ ನಾಯಿಗಳ ಹಾವಳಿ ಕುರಿತು ‘ವಿಜಯವಾಣಿ’ ಪತ್ರಿಕೆ ಜಿಲ್ಲೆಯಾದ್ಯಂತ ರಿಯಾಲಿಟಿ ಚೆಕ್ ನಡೆಸಿ ಜನವರಿ 13, 2025ರಂದು ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.