- ರೈತ ಮುಖಂಡರ ಮನವೊಲಿಸುವ ಶಾಸಕರ ಸಂಧಾನ ಸಭೆ ವಿಫಲ
- ಕನಿಷ್ಠ 100 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಪಟ್ಟು
- ಬೆಳಗಾವಿ ಅಧಿವೇಶನದಲ್ಲಿ ನಾವೂ ಕೂಡ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದ ಶಾಸಕರು
ಹಾವೇರಿ: ರೈತರಿಂದ ತಲಾ 20 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸುವ ಸರ್ಕಾರದ ನಿರ್ಧಾರ ಬದಲಿಸಿ ಕನಿಷ್ಠ 100 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಪಟ್ಟು ಹಿಡಿದಿರುವ ರೈತ ಮುಖಂಡರ ಮನವೊಲಿಸುವ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾಡಳಿತ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಶಾಸಕರ ಸಂಧಾನ ಸಭೆ ವಿಫಲಗೊಂಡಿತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಡಿ.8ರಂದು ಮೋಟೆಬೆನ್ನೂರ ರಾಷ್ಟ್ರೀಯ ಹೆದ್ದಾರಿಯನ್ನು ಅನಿರ್ದಿಷ್ಟಾವಧಿಯಾಗಿ ಬಂದ್ ಮಾಡಿ ಪ್ರತಿಭಟಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಶುಕ್ರವಾರ ರೈತ ಮುಖಂಡರ ಸಭೆ ಕರೆದಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ಕ್ವಿಂಟಾಲ್ ಬದಲಿಗೆ 20 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರದಿಂದ ಈಗಾಗಲೇ ಎಲ್ಲೆಡೆ ಖರೀದಿ ಕೇಂದ್ರವನ್ನೂ ತೆರೆಯಲಾಗಿದೆ. ಹಾಗಾಗಿ, ರೈತರು ಹೋರಾಟ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದರು. ಬೆಳಗಾವಿ ಅಧಿವೇಶನದಲ್ಲಿ ಗೋವಿನಜೋಳ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ನಡೆಸಿ 50 ಕ್ವಿಂಟಾಲ್ ನಿಗದಿ ಮಾಡಲು ನಾವೂ ಕೂಡ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಶಾಸಕರು ಮನವೊಲಿಸಲು ಯತ್ನಿಸಿದರು.
ಇದಕ್ಕೆ ಒಪ್ಪದ ರೈತ ಸಂಘದ ಪದಾಧಿಕಾರಿಗಳು ಸರ್ಕಾರ ನಿಗದಿಪಡಿಸಿರುವ ಒಬ್ಬ ರೈತನಿಂದ 20 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಬದಲಾಗಿ 100 ಕ್ವಿಂಟಾಲ್ ಖರೀದಿಸಬೇಕೆಂದು ಆಗ್ರಹಿಸಿದರು. ತಾವು ಹೇಳಿದಂತೆ 20 ಕ್ವಿಂಟಾಲ್ ಕೊಟ್ಟು ಉಳಿದ ಬೆಳೆಯನ್ನು ತಿಪ್ಪೆಗೆ ಎಸೆಯಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಹಿರೇಕೆರೂರ ಶಾಸಕ ಯು.ಬಿ.ಬಣಕಾರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಯಶೋಧಾ ವಂಟಗೋಡಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರವೀಂದ್ರಗೌಡ ಪಾಟೀಲ, ಮರಿಗೌಡ ಪಾಟೀಲ, ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ, ಎಚ್.ಎಚ್.ಮುಲ್ಲಾ, ರಾಜು ತರ್ಲಗಟ್ಟ, ಸುರೇಶ ಮೈದೂರ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ, ರುದ್ರಪ್ಪ ಅಣ್ಣಿ, ಜಾನ್ ಪುನೀತ, ಅಬ್ದುಲ್ ಖಾದರ್ ಬುಡಂದಿ, ಇತರರಿದ್ದರು.
ಶುಭ ಸುದ್ದಿ ಕೊಟ್ಟರೆ ಪ್ರತಿಭಟನೆ ವಾಪಸ್
ರೈತ ಸಂಘಟನೆಯ ಬೇಡಿಕೆಗಳನ್ನು ಒಪ್ಪದಿದ್ದರೆ ಡಿ.8ರಂದು ಮೋಟೆಬೆನ್ನೂರ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಲಾಗುವುದು. ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ನಾವು 100 ಕೆಜಿಗೆ ಗಟ್ಟಿಯಾಗಿ ನಿಲ್ಲಲ್ಲ. ನೀವು 20 ಕೆಜಿಗೆ ಗಟ್ಟಿಯಾಗಿ ನಿಲ್ಲದಿರಿ. ಡಿ.8ರ ಒಳಗಾಗಿ ಸರ್ಕಾರ ಶುಭ ಸುದ್ದಿ ನೀಡಿದರೆ ಪ್ರತಿಭಟನೆ ಹಿಂಪಡೆಯಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ರೈತರ ಬೇಡಿಕೆ ಹಿನ್ನೆಲೆಯಲ್ಲಿ ಒಬ್ಬ ರೈತರಿಂದ ತಲಾ 5 ಕ್ವಿಂಟಾಲ್ ಬದಲಾಗಿ 20 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಒಪ್ಪಿದೆ. ಶುಕ್ರವಾರದ ರೈತ ಮುಖಂಡರ ಸಭೆಯಲ್ಲಿ ಕೆಲವರು ಸ್ವಾಗತಿಸಿದ್ದು, ಇನ್ನು ಕೆಲವರು ಸಮಯ ಕೇಳಿದ್ದಾರೆ. ಮೊದಲು 20 ಕ್ವಿಂಟಲ್ ಖರೀದಿಗೆ ನೋಂದಾಯಿಸಿ, ನಂತರ ಮಾರುಕಟ್ಟೆ ದರವೂ ಹೆಚ್ಚಳವಾಗುತ್ತದೆ. ಬಳಿಕ ಸರ್ಕಾರ ಹಂತ ಹಂತವಾಗಿ ಖರೀದಿ ಪ್ರಮಾಣ ಹೆಚ್ಚಿಸಲಿದೆ. ರೈತರು ಹೋರಾಟ ಕೈಬಿಟ್ಟು ಸರ್ಕಾರದ ಜತೆಗೆ ಸ್ಪಂದಿಸಿದರೆ, ಸರ್ಕಾರ ಇನ್ನೂ ಹೆಚ್ಚಿನ ಖರೀದಿಗೆ ಉತ್ಸುಕವಾಗಿದೆ.