Haveri, DC, Police, SP, SLV Mahila Mart, Womens,  
ಹಾವೇರಿ

ವಂಚಕರನ್ನು ಬಂಧಿಸಿ, ಹಣ ವಾಪಸ್ ಕೊಡಿಸಿ; ಎಸ್‌ಎಲ್‌ವಿ ಮಹಿಳಾ ಮಾರ್ಟ್‌ನಿಂದ ಮೋಸ ಹೋದ ಮಹಿಳೆಯರ ಆಗ್ರಹ; ಸಾವಿರ ಮಹಿಳೆಯರಿಗೆ 10 ಕೋಟಿ ವಂಚನೆ

ಹಾವೇರಿ: ಇಲ್ಲಿನ ಅಶ್ವಿನಿನಗರದಲ್ಲಿ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೇಟಿಂಗ್ ಹೆಸರಲ್ಲಿ ಸಂಸ್ಥೆ ಆರಂಭಿಸಿ, ಮಹಿಳೆಯರಿಗೆ ಮನೆಯಲ್ಲೇ ಉದ್ಯೋಗ ನೀಡುವುದಾಗಿ ನಂಬಿಸಿ, ಸಾವಿರಾರು ಮಹಿಳೆಯರಿಂದ ಸುಮಾರು 10 ಸಾವಿರ ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪಿತರನ್ನು ಕೂಡಲೇ ಬಂಧಿಸಬೇಕು. ಅಮಾಯಕ ಮಹಿಳೆಯರ ಹಣ ವಾಪಸ್ ಕೊಡಿಸಬೇಕು ಎಂದು ಸಂತ್ರಸ್ತೆಯೊಬ್ಬರ ಪತಿ ಮಂಜುನಾಥ ಅರಳಿಕಟ್ಟಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಹಿಳೆಯರಿಗೆ ಊದಬತ್ತಿ, ಕರ್ಪೂರ, ಇತರ ವಸ್ತುಗಳ ಪ್ಯಾಕಿಂಗ್ ಕೆಲಸವನ್ನು ಮನೆಯಲ್ಲಿಯೇ ನೀಡುವುದಾಗಿ ನಂಬಿಸಿ, ಅವರಿಂದ ಮುಂಗಡವಾಗಿ 25 ಸಾವಿರದಿಂದ 20 ಲಕ್ಷ ರೂ.ವರೆಗೆ ಠೇವಣಿ ಹಣ ಪಾವತಿಸಿಕೊಂಡಿದ್ದಾರೆ. ಠೇವಣಿ ಹಣದ ಆಧಾರದಲ್ಲಿ ಪ್ರತಿ ತಿಂಗಳು ಸಂಬಳ ಕೊಡುವುದಾಗಿ ನಂಬಿಸಿದ್ದಾರೆ. ಆರಂಭದಲ್ಲಿ ಮೂರು-ನಾಲ್ಕು ತಿಂಗಳು ಹಣ ಕೊಟ್ಟು, ವಿಶ್ವಾಸ ಮೂಡುವಂತೆ ಮಾಡಿದ್ದಾರೆ. ನಂತರ ಏಕಾಏಕಿ ನಾಪತ್ತೆಯಾಗಿದ್ದಾರೆ ಎಂದರು.
ವಂಚನೆಗೆ ಒಳಗಾದ ಮಹಿಳೆಯರಲ್ಲಿ ಕೆಲವರು ಪತಿಗೆ ತಿಳಿಯದಂತೆ ಬಂಗಾರ ಅಡವಿಟ್ಟು, ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದಾರೆ. ಸುಮಾರು ಒಂಬತ್ತು ತಿಂಗಳುಗಳಿಂದ ಈ ಯೋಜನೆ ನಡೆಯುತ್ತಿದ್ದು, ಸಾವಿರಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರಾಗಿದ್ದಾರೆ. ಒಟ್ಟು 10 ಕೋಟಿಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಜೂನ್ 13ರಂದು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನೆಲೋಗಲ್ಲ ಮೂಲದ ವಿನಾಯಕ ಆನ್ವೇರಿ, ರಮ್ಯಾ ಜಿ., ವೀರೇಶ ಆನ್ವೇರಿ, ರಮ್ಯಾ ವೀರೇಶ ಆನ್ವೇರಿ, ಜಯಶ್ರೀ ಆನ್ವೇರಿ, ಹಾಗೂ ಮಂಜುನಾಥ ಆನ್ವೇರಿ ವಿರುದ್ಧ ದೂರು ದಾಖಲಾಗಿದೆ. ಒಂದು ತಿಂಗಳಾದರೂ ಆರೋಪಿಗಳ ಬಂಧನವಾಗಿಲ್ಲ. ತನಿಖೆಯ ಪ್ರಗತಿ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾ ಅಂಗಡಿ ಮಾತನಾಡಿ, ನಮ್ಮ ಕುಟುಂಬಕ್ಕೆ ನೆರವಾಗುತ್ತದೆ ಎಂಬ ಉದ್ದೇಶದಿಂದ ನಾನು ಮೊದಲಿಗೆ ಒಂದು ಲಕ್ಷ ಹಣ ಪಾವತಿಸಿದ್ದೆ. ಪ್ರತಿ ತಿಂಗಳು 20 ಸಾವಿರ ರೂ.ನಂತೆ ನಾಲ್ಕು ತಿಂಗಳು ಹಣ ಪಾವತಿಸಿದರು, ಇದರಿಂದ ನಂಬಿಕೆ ಬಂತು. ಬಳಿಕ ಸಾಲ ಮಾಡಿ ಮತ್ತೆ ನಾಲ್ಕು ಲಕ್ಷ ಪಾವತಿಸಿದೆ. ಆದರೆ, ಅಷ್ಟರಲ್ಲಿ ಅವರು ಸಂಸ್ಥೆಯ ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ನನ್ನ ಕುಟುಂಬ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾರದಾ, ಮಮತಾ ಮರೆಮ್ಮನವರ, ನವ್ಯಾ ಎಂ., ಭಾಗ್ಯ ಪರಸಣ್ಣನವರ, ಲತಾ ಸೂರಣಗಿ, ಇತರರಿದ್ದರು.
ಅನಾಹುತ ಆಗುವ ಮುನ್ನ ಕ್ರಮ ಜರುಗಿಸಿ
ಜು.7ರಂದು ಹಾವೇರಿಯ ಹಾನಗಲ್ಲ ರಸ್ತೆಯಲ್ಲಿ ಆರೋಪಿಗಳು ನಡೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಆರ್ಥಿಕ ಸಂಕಷ್ಟದಿಂದ ಕೆಲ ನೊಂದ ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿದ್ದು, ಅವರನ್ನು ತಡೆದು ಸಮಾಧಾನಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸುವ ಭೀತಿ ಎದುರಾಗಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿತರನ್ನು ಬಂಧಿಸಬೇಕು ಎಂದು ಮಂಜುನಾಥ ಆಗ್ರಹಿಸಿದರು.