manual scavengers, problems, 
ಹಾವೇರಿ

ಶೌಚಗುಂಡಿಗಳಿಗೆ ಕಾರ್ಮಿಕರು ಇಳಿಯದಂತೆ ನೋಡಿಕೊಳ್ಳಿ; ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ ಜಾಗೃತಿ ಮೂಡಿಸಿ; ಅಧಿಕಾರಿಗಳಿಗೆ ಡಿಸಿ ಸೂಚನೆ

ಹಾವೇರಿ: ಶೌಚಗುಂಡಿಗಳು, ಸೆಪ್ಟಿಕ್ ಟ್ಯಾಂಕ್‌ಗಳು, ಒಳ ಚರಂಡಿಗಳ ಸ್ವಚ್ಛತೆಗಾಗಿ ಕಾರ್ಮಿಕರು ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಹಾಗೂ ಇನ್ ಸ್ಯಾನಿಟರಿ ಲ್ಯಾಟ್ರಿನ್ಸ್ ಮತ್ತು ಸಫಾಯಿ ಕರ್ಮಚಾರಿಗಳ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆಗಳ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಮೀಕ್ಷೆಯಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯ, ಸಹಾಯಧನ- ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಆಯ್ಕೆಗೆ ಆದ್ಯತೆ ನೀಡಿಬೇಕು. ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳು ಆ ಯೋಜನೆ ಸದುಪಯೋಗ ಪಡೆದುಕೊಂಡಿರುವ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಚರ್ಮ ಕುಶಲಕರ್ಮಿಗಳಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಹಾಗೂ ವಿವಿಧ ಯೋಜನೆಗಳಡಿ ಸೌಲಭ್ಯ ತಲುಪಿಸಬೇಕು ಎಂದು ಲಿಡಕರ್ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದುಕೊರತೆಗಳ ನಿವಾರಣಾ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸುನೀಲ ಬೆಟಗೇರಿ, ಮಾರುತಿ ಹಂಜಗಿ, ಪೃಥ್ವಿರಾಜ ಬೆಟಗೇರಿ, ಎಚ್.ಡಿ.ಹೊನ್ನಕ್ಕಳವರ ಹಾಗೂ ಗುತ್ತೆಪ್ಪ ಹರಿಜನ, ಅರ್ಹ ಚರ್ಮ ಕುಶಲಕರ್ಮಿಗಳನ್ನು ಗುರುತಿಸಬೇಕು ಹಾಗೂ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಹಾವೇರಿ ನಗರದಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಲಾದ ಸಾರ್ವಜನಿಕ ಶೌಚಗೃಹ ನಿರ್ವಹಣೆ, ಮ್ಯಾನ್ಯುಯಲ್ ಸ್ಕಾವೆಂಜರ್‌ಗಳಿಗೆ ವಿವಿಧ ಯೋಜನೆಗಳ ಸೌಲಭ್ಯ ದೊರೆಯಬೇಕು ಎಂದು ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ಸುಭಾಸ ಬೆಂಗಳೂರು, ಭೀಮಪ್ಪ ಯಲ್ಲಾಪೂರ ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಜಿಲ್ಲೆಯ ಹಾನಗಲ್ಲ ತಾಲೂಕು ಕೂಸನೂರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಆಡೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಶೇ.24.10ರ ಅನುದಾನದಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಶೇ.20ರಷ್ಟು ಮೀಸಲಿರಿಸಿದ ಅನುದಾನದಲ್ಲಿ ಭೌತಿಕ ಹಾಗೂ ಗುರಿ ಸಾಧಿಸಲಾಗಿದೆ. ಅದೇ ರೀತಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಪಿ.ಎಂ.ಎ.ವೈ. ಹಾಗೂ ಜಿ+1 ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಮನೆ ಹಂಚಿಕೆಗೆ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅದೇ ರೀತಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ನೇರ ಸಾಲ ಯೋಜನೆಯಡಿ ಮೂರು ಹಾಗೂ ವಸತಿ ಯೋಜನೆಯಡಿ ಒಂಭತ್ತು ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಲ್.ವೈ.ಶಿರಕೋಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನೀತ, ಉಪ ವಿಭಾಗಾಧಿಕಾರಿಗಳಾದ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಹಾಗೂ ಇನ್‌ಸ್ಯಾನಿಟರಿ ಲ್ಯಾಟ್ರಿನ್ಸ್ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಗೌರಮ್ಮ ನಾಗರಾಜ ಮಂತ್ರಿ, ಗೀತಾ ನಾರಾಯಣ ನೆಲ್ಲೂರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಇತರರು ಉಪಸ್ಥಿತರಿದ್ದರು.
ಲಿಡಕರ್ ಮ್ಯಾನೇಜರ್ ಗೆ ತರಾಟೆ
ಜಿಲ್ಲೆಯಲ್ಲಿರುವ ಚರ್ಮ ಕುಶಲಕರ್ಮಿಗಳ ಸಂಖ್ಯೆ ಹಾಗೂ ವಿವಿಧ ಯೋಜನೆಗಳ ಸೌಲಭ್ಯಗಳ ಮಾಹಿತಿ ಪಡೆದ ಫಲಾನುಭವಿಗಳ ಮಾಹಿತಿ ನೀಡಲು ತಡವರಿಸಿದ ಲಿಡಕರ್ ಜಿಲ್ಲಾ ವ್ಯವಸ್ಥಾಪಕರನ್ನು ಜಿಲ್ಲಾಧಿಕಾರಿಯವರು ತರಾಟೆಗೆ ತೆಗೆದುಕೊಂಡರು.
ಯಾವ ಫಲಾನುಭವಿಗೆ ಸೌಲಭ್ಯ ನೀಡಲಾಗಿದೆ ಎಂದು ಗೊತ್ತಿಲ್ಲ, ಜಿಲ್ಲೆಯ ಚರ್ಮ ಕುಶಲಕರ್ಮಿಗಳ ಸಂಖ್ಯೆ ಗೊತಿಲ್ಲ, ಏನು ಕೆಲಸ ಮಾಡುತ್ತೀರಿ ಎಂದು ಡಿಸಿ ಪ್ರಶ್ನಿಸಿದರು. ಲಿಡಕರ್ ಜಿಲ್ಲಾ ವ್ಯವಸ್ಥಾಪಕರ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.