Haveri, DC, DDPI, SSLC, Exams, Results, sanmana,  
ಹಾವೇರಿ

ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗಿ; ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಏಳನೇ ಸ್ಥಾನ ಪಡೆದಿದ್ದು ಶ್ಲಾಘನೀಯ; ಅಭಿನಂದನಾ ಸಮಾರಂಭದಲ್ಲಿ ಡಿಸಿ ಬಣ್ಣನೆ

ಹಾವೇರಿ: ಜಗತ್ತಿನಲ್ಲಿ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ. ಶಿಕ್ಷಣದಲ್ಲಿ ಕಾಲಕಾಲಕ್ಕೆ ಪರಿವರ್ತನೆಗಳು ಆಗುತ್ತಿದ್ದು, ಶಿಕ್ಷಕರು ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಿ, ಸಮರ್ಥವಾಗಿ ಎದುರಿಸುವ ಮೂಲಕ ಮುಂಬರುವ ಶೈಕ್ಷಣಿಕ ವರ್ಷದಲ್ಲೂ ಮಿಷನ್-100 ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ವತಿಯಿಂದ ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ -1 ಫಲಿತಾಂಶ ವಿಶ್ಲೇಷಣೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹೀಗೆ 249 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಶೈಕ್ಷಣಿಕವಾಗಿ ಪ್ರತಿಸಲ ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಧಾರವಾಡ ಜಿಲ್ಲೆಗಳು ಮುಂದೆ ಇರುತ್ತಿದ್ದವು. ಆದರೆ, ಈ ಸಲ ಹಾವೇರಿ ಈ ಜಿಲ್ಲೆಗಳನ್ನು ಹಿಂದೆ ಹಾಕಿ ಏಳನೇ ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳು ಶೇ.97.49ರಷ್ಟು, ಅನುದಾನಿತ ಶಾಲೆಗಳು ಶೇ.95.73 ಹಾಗೂ ಅನುದಾನ ರಹಿತ ಶಾಲೆಗಳು ಶೇ.97.60ರಷ್ಟು ಫಲಿತಾಂಶ ಪಡೆದಿವೆ. ಉರ್ದು ಮಾಧ್ಯಮದಲ್ಲಿ ಶೇ.92.79, ಕನ್ನಡ ಮಾಧ್ಯಮದಲ್ಲಿ ಶೇ.96.92 ಹಾಗೂ ಇಂಗ್ಲಿಷ್ ಮಾಧ್ಯಮ ಶೇ.98.04ರಷ್ಟು ಮಾಧ್ಯಮವಾರು ಉತ್ತಮ ಫಲಿತಾಂಶ ಬಂದಿವೆ. ಸಾರ್ವಜನಿಕರು ಶಿಕ್ಷಕರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಶಿಕ್ಷಕರು ಕೂಡ ಒಳ್ಳೆಯ ಫಲಿತಾಂಶ ತಂದುಕೊಡುವಲ್ಲಿ ವಿದ್ಯಾರ್ಥಿಗಳನ್ನು ಸಿದ್ದಗೊಳಿಸಬೇಕು ಎಂದರು.
ಡಿಡಿಪಿಐ ಮೋಹನ್ ದಂಡಿನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್ ಆರ್., ಡಯಟ್ ಪ್ರಾಚಾರ್ಯ ಝಡ್.ಎಂ ಖಾಜಿ ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಬಿಆರ್‌ಸಿ, ಸಿಆರ್‌ಪಿಗಳು, ಶಾಲಾ ಮುಖ್ಯೋಪಾಧ್ಯಾಯರು, ಮತ್ತಿತರರು ಉಪಸ್ತಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.
ಶಿಕ್ಷಣಕ್ಕೆ ಅಷ್ಟ ಗ್ಯಾರಂಟಿ
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಂತೆ, ಶಿಕ್ಷಣ ಕ್ಷೇತ್ರದಲ್ಲೂ ಕೂಡ ಅಷ್ಟ (8) ಗ್ಯಾರಂಟಿ ಕೊಡುವುದಾಗಿ ತಿಳಿಸಿದೆ. ಶಿಕ್ಷಕರ ಹುದ್ದೆ ಭರ್ತಿ, ವಿಷಯವಾರು ಶಿಕ್ಷಕರ ನೇಮಕ, ಪಾಲಕರಿಗೆ ಮಾಧ್ಯಮ ಆಯ್ಕೆ, ಕೆಪಿಎಸ್ ಶಾಲೆ ಮಕ್ಕಳಿಗೆ ಉಚಿತ ವಾಹನ ಸೌಲಭ್ಯ, ಕಂಪ್ಯೂಟರ್ ಆಧಾರಿತ ಎ.ಐ ಶಿಕ್ಷಣ, ಪಾಲಕರ ಸಭೆ, ಶಿಕ್ಷಕರ ಮೇಲಿನ ಹೊರೆ ಕಡಿಮೆ ಮಾಡಿ ಬೋಧನೆಗೆ ಮಾತ್ರ ಸೀಮಿತ, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ಮಾಡುವುದಾಗಿದೆ ಎಂದು ಡಿಸಿ ತಿಳಿಸಿದರು.
ವಿದ್ಯಾರ್ಥಿ, ಶಿಕ್ಷಕರಿಗೆ ಸನ್ಮಾನ
ಕನ್ನಡ, ಉರ್ದು ಹಾಗೂ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಕಾರಿಗಳು, ಮುಖ್ಯೋಪಾಧ್ಯಾಯರು, ವಿಷಯವಾರು ನೂರು ಅಂಕ ಪಡೆಯಲು ಪಾತ್ರರಾದ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
"

ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ, ಉತ್ತಮವಾಗಿ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಬೇಕು. ಹಾಗಂತ ಅಂಕ ಗಳಿಸುವುದೇ ನಮ್ಮ ಧ್ಯೇಯವಾಗಬಾರದು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಸಂಸ್ಕಾರ, ಸಾಮಾನ್ಯ ಜ್ಞಾನ ಹೀಗೆ ಎಲ್ಲವೂ ಸಿಗುತ್ತಿದ್ದು, ಮಕ್ಕಳು ಸುವರ್ಣ ದಿನಗಳನ್ನು ಅನುಭವಿಸಬೇಕು. ಈ ಬಾರಿ ಫಲಿತಾಂಶ ಏಳನೇ ಸ್ಥಾನದಲ್ಲಿದ್ದು, ಇಷ್ಟಕ್ಕೆ ತೃಪ್ತಿ ಪಡುವುದು ಬೇಡ. ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಗೆ ಒಳಗಾಗದೇ ಟಾಪ್ 3 ಸ್ಥಾನದಲ್ಲಿ ಇರುವಂತೆ ಶ್ರಮಿಸಿ.

— ಯಶೋಧಾ ವಂಟಗೋಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


"

ಬೆಳಗಾವಿ ವಿಭಾಗ ಮಟ್ಟದಲ್ಲಿ ಹಾವೇರಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಮೈಸೂರು, ಬೆಂಗಳೂರು ವಿಭಾಗಕ್ಕಿಂತ ಬೆಳಗಾವಿ ವಿಭಾಗ ಈ ವರ್ಷದ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿದೆ. ಗುಣಮಟ್ಟದ ಫಲಿತಾಂಶ ಬರಲಿಕ್ಕೆ, ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಉತ್ತಮ ಫಲಿತಾಂಶ ಜಿಲ್ಲೆ ಪಡೆದುಕೊಳ್ಳುವಂತಾಗಲಿ.

— ಈಶ್ವರ ನಾಯಕ, ನಿರ್ದೇಶಕ, ಶಿಕ್ಷಣ ಇಲಾಖೆ