Haveri, Court, Fake Bomb, Mail, Dog Squad, 
ಹಾವೇರಿ

ಜಿಲ್ಲಾ ಕೋರ್ಟ್‌ಗೆ ಮೂರನೇ ಬಾರಿ ಬಾಂಬ್ ಬೆದರಿಕೆ; ಕಲಾಪಗಳಿಗೆ ಅಡೆತಡೆ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ತಪಾಸಣೆ

ಹಾವೇರಿ: ನಗರದ ಹಳೆಯ ಪಿ.ಬಿ. ರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಮೇಲ್ ಸಂದೇಶವೊಂದು ಸೋಮವಾರ ನ್ಯಾಯಾಲಯಕ್ಕೆ ಬಂದಿತ್ತು. ಈ ಮೂಲಕ ವಾರದಲ್ಲಿ ಎರಡನೇ ಬಾರಿ ಸೇರಿದಂತೆ ಈ ವರ್ಷ ಮೂರು ಬಾರಿ ಬೆದರಿಕೆ ಸಂದೇಶ ಬಂದಂತಾಗಿದೆ. ಇದರಿಂದ ವಕೀಲರು, ಕಕ್ಷಿದಾರರಿಗೆ ಸುಮಾರು ಎರಡು ತಾಸು ಕೆಲಸಗಳಿಗೆ ಅಡೆತಡೆ ಉಂಟಾಯಿತು.
ಕೋರ್ಟ್‌ನಲ್ಲಿ ಬಾಂಬ್ ಸ್ಪೋಟ ಮಾಡುವುದಾಗಿ ದುಷ್ಕರ್ಮಿಗಳು ಬೆಳಗ್ಗೆ ಬೆದರಿಕೆ ಸಂದೇಶವುಳ್ಳ ಮೇಲ್ ಕಳುಹಿಸಿದ್ದರು. ಇದರಿಂದ ಕೋರ್ಟ್ ಆವರಣದಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. ವಕೀಲರು, ಕಕ್ಷಿದಾರರು ಹಾಗೂ ಕೋರ್ಟ್ ಸಿಬ್ಬಂದಿ ಕೋರ್ಟ್ ಕಲಾಪಗಳನ್ನು ಬಿಟ್ಟು ಓಡಿ ಹೊರ ಬಂದರು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಾವೇರಿ ಶಹರ ಠಾಣೆ ಪೊಲೀಸರು, ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಧಾವಿಸಿ ಪರಿಶೀಲಿಸಿದರು. ಕೋರ್ಟ್ ಆವರಣ, ಬೇಸ್‌ಮೆಂಟ್, ಕಾರ್, ಬೈಕ್ ಪಾರ್ಕಿಂಗ್ ಸ್ಥಳ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದರು.
ಕೋರ್ಟ್ ಹೊರಗಡೆ ನೂರಾರು ವಕೀಲರು, ಸಾರ್ವಜನಿಕರು ಜಮಾಯಿಸಿದ್ದರು. ಸ್ಪೋಟಕ ವಸ್ತುಗಳು ಏನೂ ಸಿಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು 12.30ರ ಸುಮಾರಿಗೆ ಮತ್ತೆ ಕಲಾಪಗಳನ್ನು ಆರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಆರೋಪಿತರ ಬಂಧನಕ್ಕೆ ಆಗ್ರಹ
ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಫೆಬ್ರವರಿ 16 ಹಾಗೂ ಜೂನ್ 27ರಂದು ಇದೇ ರೀತಿ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಮೂರನೇ ಬಾರಿಗೆ ಸೋಮವಾರ ಮತ್ತೆ ಇಂತಹ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಕೋರ್ಟ್‌ಗೆ ಆಗಮಿಸಿದ್ದ ರೈತರು, ಕಾರ್ಮಿಕರು, ಸಾರ್ವಜನಿಕರ ಸಮಯ ವ್ಯರ್ಥವಾಯಿತು. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಆರೋಪಿತರನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.