Haveri, Cooler for, Police Dogs, Dog Squad, SP Visit,
ಹಾವೇರಿ: ಬೇಸಿಗೆಯ ಬಿಸಿಲಾಘಾತದಿಂದ ಬಳಲುತ್ತಿದ್ದ ಪೊಲೀಸ್ ಶ್ವಾನಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಕೂಲರ್ ಭಾಗ್ಯ ಕರುಣಿಸಿದ್ದು, ಬಿಸಿಲಿಗೆ ಬಸವಳಿದಿದ್ದ ಶ್ವಾನಗಳು ಇದೀಗ ನಿಟ್ಟುಸಿರು ಬಿಟ್ಟಿವೆ.
ಈ ಬಾರಿ ಬೇಸಿಗೆಯ ತಾಪ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲೂ ಉಷ್ಣಾಂಶ ಶೇ.38 ದಾಟಿದೆ. ಬಿಸಿಗಾಳಿಗೆ ಪ್ರಾಣಿ, ಪಕ್ಷಿಗಳು ಕುಗ್ಗಿ ಹೋಗಿವೆ. ಜಿಲ್ಲೆಯ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿನ ನಾಲ್ಕು ಶ್ವಾನಗಳೂ ಬಿಸಿಲಿನಿಂದ ತತ್ತರಿಸಿದ್ದವು. ಏರುತ್ತಿರುವ ತಾಪಮಾನದಿಂದ ಸಮಸ್ಯೆಗೆ ಸಿಲುಕಿದ್ದವು.
ಶ್ವಾನದಳದ ಪಾರು, ಆರ್ಯ, ಸಾನ್ಸಾ ಸೇರಿ ನಾಲ್ಕು ಶ್ವಾನಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪ್ರತ್ಯೇಕ ನಾಲ್ಕು ಕೂಲರ್‌ಗಳನ್ನು ಅಳವಡಿಸಲಾಗಿದೆ. ಬಿಸಿಲು ಹೆಚ್ಚಾದ ಪರಿಣಾಮ ಮಧ್ಯಾಹ್ನ ಸಪ್ಪೆಯಾಗಿರುವುದು, ತೇಗುವುದು ಕಂಡು ಬರುತ್ತಿತ್ತು. ಕೂಲರ್ ಅಳವಿಡಿಸದ ನಂತರ ಈಗ ಸಾಮಾನ್ಯವಾಗಿ ಆರಾಮದಾಯಕವಾಗಿವೆ ಎಂದು ಶ್ವಾನದಳದ ಸಿಬ್ಬಂದಿ ತಿಳಿಸಿದರು.
ಕೊಲೆ, ಕಳ್ಳತನ ಪತ್ತೆ ಹಚ್ಚಿದ್ದ ಪಾರು
ಜಿಲ್ಲಾ ಶ್ವಾನ ದಳದಲ್ಲಿ ಸದ್ಯ ಜರ್ಮನ್ ಶಪರ್ಡ್, ಲ್ಯಾಬ್ರಡಾರ್, ಡಾಬರ್‌ಮನ್ ತಳಿಯ ನಾಲ್ಕು ಶ್ವಾನಗಳಿವೆ. ಅಪರಾಧ, ಬಾಂಬ್ ನಿಷ್ಕ್ರಿಯ ದಳ ವಿಭಾಗದಲ್ಲಿ ಪರಿಣಿತಿ ಪಡೆದಿವೆ. ಕೊಲೆ, ದರೋಡೆ, ಕಳ್ಳತನ, ಮತ್ತಿತರ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಇವು ಸಹಾಯ ಮಾಡುತ್ತವೆ. ಪಾರು ಎಂಬ ಶ್ವಾನ ಆಡೂರ ಠಾಣೆ ವ್ಯಾಪ್ತಿಯಲ್ಲಿ ಕಳ್ಳರ ಪತ್ತೆ ಮಾಡಿತ್ತು. ಹಾವೇರಿ ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ಚಾಲಕನ ಹತ್ಯೆಗೈದು, 2 ಕೋಟಿ ರೂ. ಮೌಲ್ಯದ ಸಾಮಗ್ರಿ ಕದ್ದಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳಿಗೆ ಪ್ರಮುಖ ಸುಳಿವು ನೀಡಿತ್ತು. ಈವರೆಗೆ ಹತ್ತಾರು ಪ್ರಕಣಗಳಲ್ಲಿ ಪಾರು ಆರೋಪಿಗಳ ಪತ್ತೆ ಮಾಡಿದೆ ಎಂದು ಎಸ್‌ಪಿ ಯಶೋಧಾ ಹೇಳಿದರು.
"
ಮನುಷ್ಯನ ದೇಹದ ಉಷ್ಣಾಂಶಕ್ಕಿಂತ ನಾಯಿಗಳ ದೇಹದ ಉಷ್ಣಾಂಶ ಹೆಚ್ಚಾಗಿರುತ್ತದೆ. ಜತೆಗೆ ಬಿಸಿಲು ಹೆಚ್ಚಾದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು (ಡಿಹೈಡ್ರೇಶನ್), ಡಯೇರಿಯಾ, ಇತರ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ನಮ್ಮ ಶ್ವಾನದಳದ ಶ್ವಾನಗಳಿಗೆ ಯಾವ ಸಮಸ್ಯೆ ಆಗಬಾರದು ಎಂದು ಮುನ್ನೆಚ್ಚರಿಕೆಯಿಂದ ಕೂಲರ್‌ಗಳನ್ನು ಅಳವಡಿಸಲಾಗಿದೆ. ಫುಡ್ ಚಾರ್ಟ್ ಪ್ರಕಾರ ಊಟ ವಿತರಿಸಲಾಗುತ್ತಿದೆ.
— ಯಶೋಧಾ ವಂಟಗೋಡಿ, ಹಾವೇರಿ ಎಸ್‌ಪಿ