dr.rm kuberappa, mlc ticket, 
ಹಾವೇರಿ

ಫೆ.14ರಂದು ಅಹಿಂದ ಅಸಮಾಧಾನಿತರ ಸಮಾವೇಶ; ಸರ್ಕಾರದ ಸಾಧನಾ ಸಮಾವೇಶದಂದೇ ಪ್ರತಿಭಟನೆ; ಟಿಕೆಟ್ ವಂಚಿತ ಡಾ.ಆರ್.ಎಂ.ಕುಬೇರಪ್ಪ ಹೇಳಿಕೆ

ಹಾವೇರಿ: ಅಹಿಂದ ಸಮುದಾಯಗಳ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಮುಖಂಡರು ಅಹಿಂದ ನಾಯಕನಾದ ನನಗೆ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿಸಿದ್ದು, ಇದನ್ನು ಖಂಡಿಸಿ ನ್ಯಾಯಕ್ಕೆ ಆಗ್ರಹಿಸಿ ಫೆ.14ರಂದು ಹಾವೇರಿಯಲ್ಲಿ ಅಹಿಂದ ಅಸಮಾಧಾನಿತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪದವೀಧರ ಮತ್ತು ಶಿಕ್ಷಕರ ಘಟಕದ ಮಾಜಿ ಅಧ್ಯಕ್ಷ ಹಾಗೂ ಟಿಕೆಟ್ ವಂಚಿತ ಅಭ್ಯರ್ಥಿ ಡಾ.ಆರ್.ಎಂ.ಕುಬೇರಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.82ರಷ್ಟು ಅಹಿಂದ ಸಮುದಾಯದವರು ಇದ್ದಾರೆ. ಎಲ್ಲ ಶಾಸಕರು ಕುಬೇರಪ್ಪ ಅವರಿಗೇ ಟಿಕೆಟ್ ಕೊಡುವಂತೆ ಪತ್ರ ಕೊಟ್ಟಿದ್ದಾರೆ. ನಾಲ್ಕು ಜಿಲ್ಲೆಗಳ ಶಾಸಕರು ಹಾಗೂ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಕ್ಷದ ಕೆಲವರು ಒಂದು ಜಾತಿಗೆ ಸೀಮಿತವಾಗಿ, ಬೇರೆ ಪಕ್ಷದಿಂದ ಬಂದಿರುವ ಮೋಹನ ಲಿಂಬಿಕಾಯಿ ಅವರಿಗೆ ಟಿಕೆಟ್ ಘೋಷಿಸಿರುವುದು ಖಂಡನೀಯ ಎಂದರು.
ರಾಜ್ಯ ಸರ್ಕಾರ ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ.14ರಂದು ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಅಂದೇ ಕಾಂಗ್ರೆಸ್ ಪಕ್ಷದ ಅಸಮಾಧಾನಿತ ಅಹಿಂದ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ನನಗೆ ಟಿಕೆಟ್ ಕೈತಪ್ಪಿದ್ದಕ್ಕಾಗಿ ಸಮಾವೇಶ ಹಮ್ಮಿಕೊಂಡಿದ್ದು, ಇದು ಸರ್ಕಾರದ ಅಥವಾ ಸಾಧನಾ ಸಮಾವೇಶದ ವಿರುದ್ಧ ಅಲ್ಲ. ಪಕ್ಷದ ನಾಯಕರ ಕಣ್ಣು ತೆರೆಸಲು ಸಾವಿರ ಕಾರ್ಯಕರ್ತರ ಜತೆಗೆ ಸಮಾವೇಶ ಮಾಡಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
45 ವರ್ಷದಿಂದ ಶಿಕ್ಷಕರ ಸಂಘಟನೆ ಕಟ್ಟಿಕೊಂಡು ಹಲವು ಚುನಾವಣೆಗಳನ್ನು ಎದಿರಿಸಿದ್ದೇನೆ. ಕೆಪಿಸಿಸಿ ಪದವೀಧರರ ಘಟಕದ ಅಧ್ಯಕ್ಷನಾಗಿ ರಾಜ್ಯಾದ್ಯಂತ ಸಂಘಟನೆ ಮಾಡಿದ್ದೇನೆ. ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದಾಗಲೂ ಪಕ್ಷ ಹಾಗೂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಿ ಕೋಟ್ಯಂತರ ರೂ. ಕಳೆದುಕೊಂಡಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದಾಗ ಕೈಬಿಟ್ಟರೆ ಹೇಗೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಎನ್.ಗೌಡರ, ಎಸ್.ಎಚ್.ಹುಚ್ಚಗೌಡರ, ಮಹ್ಮದ್‌ಸಾದಿಕ್, ಡಾ.ದೇವರಾಜ ಹಂಚಿನಮನಿ, ಇತರರಿದ್ದರು.
ಕಸ ಗುಡಿಸಲು ಮಾತ್ರ ಅಹಿಂದ ಬೇಕಾ ?
ಶೇ.82ರಷ್ಟು ಮತದಾರರು ಇರುವಂಥ ಅಹಿಂದ ವರ್ಗಕ್ಕೆ ಟಿಕೆಟ್ ಕೊಡಲಿಲ್ಲ. ಸಮಸಮಾಜ, ದೀನ ದಲಿತರು ಎಂದು ಮಾತನಾಡುವ ಕಾಂಗ್ರೆಸ್ ನಾಯಕರು ಅಹಿಂದ ಕಟ್ಟಿದ ನನ್ನಂಥ ನಾಯಕನಿಗೆ ಟಿಕೆಟ್ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ಸಮಾಜದವರು ಕಸ ಗುಡಿಸಲು, ಬ್ಯಾನರ್ ಕಟ್ಟಲು ಮಾತ್ರ ಬೇಕಾ? ಎಂದು ಕುಬೇರಪ್ಪ ಖಾರವಾಗಿ ಪ್ರಶ್ನಿಸಿದರು.
"

ಶಾಸಕರ ಅಭಿಪ್ರಾಯ ಕೇಳದೇ, ಸಮೀಕ್ಷೆ ಮಾಡದೇ ಮೋಹನ ಲಿಂಬಿಕಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕೂಡಲೇ ಅಭ್ಯರ್ಥಿ ಬದಲಾಯಿಸಿ ಅಹಿಂದ ಮುಖಂಡನಾದ ನನಗೆ ಟಿಕೆಟ್ ಕೊಡಬೇಕು. ಇಲ್ಲವೇ ಸಿಎಂ, ಡಿಸಿಎಂ ಜತೆ ಮಾತುಕತೆ ನಡೆಸಿ ಎಂಎಲ್‌ಸಿಗೆ ಸಮಾನವಾದ ರಾಜಕೀಯ ಸ್ಥಾನಮಾನ ಕೊಡಬೇಕು. ಇಲ್ಲದಿದ್ದರೆ ಫೆ.14ರಂದು ಹಾವೇರಿಯಲ್ಲಿ ಅಹಿಂದ ಸಮಾವೇಶ ಕೈಬಿಡುವುದಿಲ್ಲ.