shivaji maharaj, jayanti, 
ಹಾವೇರಿ

ಹಾವೇರಿ; ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ 28ರಂದು

ಹಾವೇರಿ: ಕರ್ನಾಟಕ ಕ್ಷತ್ರೀಯ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ಫೆ.28ರಂದು ಸಂಜೆ 4 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ ಮೆಹರವಾಡೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಇಸ್ವಿಯಲ್ಲಿ ಹರಿಸಾ ಕೋಡೆ ಹಿಂದೂ ಕ್ಷತ್ರೀಯ ಮಹಾಸಭಾ ಸಂಘಟನೆ ಸ್ಥಾಪಿಸಿದರು. 2018ರಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷ ಉದಯ ಸಿಂಗ್‌ರು ಕರ್ನಾಟಕ ಕ್ಷತ್ರೀಯ ಒಕ್ಕೂಟ ಎಂದು ಮರುನಾಮಕರಣ ಮಾಡಿ, ರಾಜ್ಯಾದ್ಯಂತ ಸಂಘಟನೆ ಮಾಡಿದರು. ಜಿಲ್ಲೆಯಲ್ಲಿ 16 ಉಪ ಪಂಗಡಗಳ ಜನರು ಇದ್ದಾರೆ. ಭಾವಸಾರ ಕ್ಷತ್ರೀಯ, ಮರಾಠಾ ಕ್ಷತ್ರೀಯ, ಸೋಮವಂಶ ಕ್ಷತ್ರೀಯ, ರಾಮವಂಶ ಕ್ಷತ್ರೀಯ, ನಾಮದೇವ, ಕಲಾಲ, ಜೋಗಿ, ಕಿಳ್ಳಿಕ್ಯಾತರ, ಲಂಬಾಣಿ, ಗೊಂದಳಿ ಕ್ಷತ್ರೀಯ ಹೀಗೆ ಅನೇಕ ಸಮುದಾಯದ ಜನರು ಇದ್ದಾರೆ. ಈ ಎಲ್ಲ ಸಮಾಜಗಳ ನೇತೃತ್ವದಲ್ಲಿ ಕೋವಿಡ್ ನಂತರ ಮೊದಲ ಬಾರಿಗೆ ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ ಎಂದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ. ಮೇಲಿನಪೇಟೆ, ಸುಭಾಸ ಸರ್ಕಲ್, ದ್ಯಾಮವ್ವನಗುಡಿ ಪಾದಗಟ್ಟಿ, ಎಂ.ಜಿ ರಸ್ತೆ, ಎಂ.ಜಿ ವೃತ್ತ, ಜೆ.ಪಿ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗದಿಂದ ಶಿವಾಜಿನಗರದ ಮರಾಠಾ ಸಮುದಾಯ ಭವನ ತಲುಪಲಿದೆ. ಮೆರವಣಿಗೆಯಲ್ಲಿ ನಾಸಿಕ್ ಡೋಲು ತಂಡ ಭಾಗವಹಿಸಲಿದೆ. ಪುರುಷರು ಬಿಳಿ ಶರ್ಟ್, ಬಿಳಿ ಪ್ಯಾಂಟ್, ಜುಬ್ಬಾ, ಪೇಟಾ ಧರಿಸಲಿದ್ದು, ಮಹಿಳೆಯರು ಸೀರೆ, ಪೇಟಾ ಧರಿಸಿ ಗಮನ ಸೆಳೆಯಲಿದ್ದಾರೆ. ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಶಿವಾಜಿ ಮಹಾರಾಜರ ಅಭಿಮಾನಿಗಳು ಭಾಗವಹಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ನಾಗರಾಜ ಜೋರಾಪುರಿ, ಯುವ ಒಕ್ಕೂಟದ ಗೌರವಾಧ್ಯಕ್ಷ ದರ್ಶನ ಲಮಾಣಿ, ಮಹಾವೀರ ಘನಾತೆ, ಪ್ರಮೋದ ನವಲೆ, ಉದಯ ತಾಂಗಳೆ, ಭಾಗ್ಯಶ್ರೀ ಮೋರೆ, ಚಂದ್ರಶೇಖರ ಜಾಧವ, ನಾಮದೇವ ಸಿಂಪಿ, ರಮೇಶ ಮಾಳೋದೆ, ಲಕ್ಷ್ಮಣಸಿಂಗ್ ರಜಪೂತ, ಧರ್ಮರಾಜ ಕಜೂರಕರ, ದೇವರಾಜ ಗುಂಡೆ, ನಾಗೇಂದ್ರಪ್ಪ ಡಿ.ಕೆ., ವಿಶಾಲ ಸುಲಾಕೆ, ಶ್ರೀಕಾಂತ ಮಾಳದಕರ ಇದ್ದರು.
ಮಠಾಧೀಶರು ಭಾಗಿ :
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮೈಲಾರ ಲಿಂಗೇಶ್ವರ ದೇವಸ್ಥಾನದ ವೆಂಕಪ್ಪ ಒಡೆಯರ್, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗ್, ಶಾಸಕರಾದ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣವರ, ಇತರರು ಭಾಗವಹಿಸುವರು.