byadagi, chilly market, war effect, 
ಹಾವೇರಿ

ಬ್ಯಾಡಗಿ ಮೆಣಸಿನಕಾಯಿಗೂ ತಟ್ಟಿದ ಯುದ್ದದ ಎಫೆಕ್ಟ್ ! ; ಹಲವು ದೇಶಗಳಿಗೆ ರಫ್ತು ಸ್ಥಗಿತ, ದುಪ್ಪಟ್ಟಾದ ಸಾಗಾಣಿಕೆ ವೆಚ್ಚ

ಹಾವೇರಿ: ಇಸ್ರೇಲ್ ಮತ್ತು ಇರಾನ್ ನಡುವೆ ಆರಂಭವಾಗಿರುವ ಯುದ್ದದ ಎಫೆಕ್ಟ್ ರಾಜ್ಯದ ವಿಶ್ವವಿಖ್ಯಾತ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ತಟ್ಟಿದ್ದು, ಹಲವು ದೇಶಗಳಿಗೆ ವಿಮಾನ, ಹಡಗು ಸೌಲಭ್ಯವಿಲ್ಲದೇ ಮೆಣಸಿನಕಾಯಿ ರಫ್ತು ಸ್ಥಗಿತಗೊಂಡಿದೆ.
ಮುಂಬೈ ಮೂಲಕ ವಿಮಾನದಲ್ಲಿ ಇರಾನ್, ಇಸ್ರೇಲ್, ಮಲೇಷಿಯಾ ಸುತ್ತಮುತ್ತದ ಹಲವು ಅರಬ್ ರಾಷ್ಟ್ರಗಳಿಗೆ ಬ್ಯಾಡಗಿ ಮೆಣಸಿನಕಾಯಿ ರವಾನಿಸಲಾಗುತ್ತಿತ್ತು. ಯುದ್ದದ ಹಿನ್ನೆಲೆ ಹಲವೆಡೆ ವಿಮಾನಯಾನ ಹಾಗೂ ಹಡಗುಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳಿಗೆ ಬ್ಯಾಡಗಿ ಮೆಣಸಿನಕಾಯಿ ರಫ್ತು ಮಾಡಲಾಗದೇ ಇಲ್ಲಿನ ವ್ಯಾಪಾರಿಗಳು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮ ಮಾರುಕಟ್ಟೆಯ ಮೇಲೆ ಬೀಳುತ್ತಿದೆ ಎಂದು ಆತಂಕಕ್ಕೀಡಾಗಿದ್ದಾರೆ.
ವಿಮಾನಗಳು ಹಾಗೂ ಹಡಗುಗಳ ಸೌಲಭ್ಯ ಕಡಿಮೆ ಇರುವ ಕಾರಣ ಹಡಗುಗಳಲ್ಲಿ ಕಂಟೇನರ್ ಸಿಗುತ್ತಿಲ್ಲ. ಮೊದಲು 40 ಫೀಟ್ ಕಂಟೇನರ್‌ಗೆ 1,800 ಯುಎಸ್ ಡಾಲರ್ ಇದ್ದ ಬಾಡಿಗೆ, ಈಗ 3,800 ಯುಎಸ್ ಡಾಲರ್‌ಗೆ ಹೆಚ್ಚಳವಾಗಿದೆ. ಹೀಗೆಯೇ ಮುಂದುವರಿದರೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ವರ್ಷ ಮೆಣಸಿನಕಾಯಿ ಬೆಳೆ ಕಡಿಮೆ ಇದೆ. ಅರಬ್ ದೇಶಗಳಿಗೆ ರಫ್ತು ಬಂದ್ ಆದರೆ ದೇಶದಲ್ಲೇ ಮಾರಬಹುದು ಎಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವರ್ತಕರ ಸಂಘದ ಗೌರವ ಕಾರ್ಯದರ್ಶಿ ರಾಜು ಎಸ್. ಮೋರಿಗೇರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.