bus rash driving, baby death,
ಹಾವೇರಿ: ಬಸ್ ನಿಲ್ದಾಣದ ಕಾರಿಡಾರ್‌ಗೆ ನುಗ್ಗಿದ ಸಾರಿಗೆ ಬಸ್ ಎರಡು ವರ್ಷದ ಮಗು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸವಣೂರಿನ ಹಜರತ್ ಅಲಿ ಇಸ್ಮಾಯಿಲ್ ರಾಯಚೂರ (2) ಮೃತಪಟ್ಟ ಮಗು.
ಬಂಕಾಪುರದ ವಾಸುದೇವ ಉತಳೇಕರ (44), ಹರ್ಷಾ ಉತಳೇಕರ (6), ಕಾವ್ಯಾಂಜಲಿ ಉತಳೇಕರ (39) ಹಾಗೂ ಸವಣೂರಿನ ಅರಬಾಜಖಾನ್ ಸೌದಾಗರ (13) ಗಾಯಗೊಂಡವರು.
ಹಾವೇರಿಯಿಂದ ಲಕ್ಷ್ಮೇಶ್ವರಕ್ಕೆ ತೆರಳಬೇಕಿದ್ದ ಬಸ್ ಅತಿ ವೇಗದಲ್ಲಿ ನುಗ್ಗಿದೆ. ಚಾಲಕ ಮಂಜುನಾಥ ರಾಜಪ್ಪ ವೇಗವಾಗಿ ಬಸ್ ಚಲಾಯಿಸಿಕೊಂಡು ಬಂದು ಕಾರಿಡಾರ್ ಗೆ ನುಗ್ಗಿಸಿದ್ದಾನೆ.
ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಬಸ್ ಹರಿದಿದೆ. ಬೇಕರಿ ಬಳಿ ನಿಂತಿದ್ದ ಪ್ರಯಾಣಿಕರಿಗೆ ಬಸ್ ಡಿಕ್ಕಿಪಡಿಸಿ ಅವಘಡ ಸಂಭವಿಸಿದೆ. ಗಾಯಾಳು ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹುಬ್ಬಳ್ಳಿ ಕಿಮ್ಸ್ ಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳದಲ್ಲಿ ಗಾಯಾಳುಗಳ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಚಾಲಕ-ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಡಿಶಾಪ ಹಾಕಿದರು. ಸ್ಥಳದಲ್ಲಿ ನೂರಾರು ಜನರ ಜಮಾವಣೆಗೊಂಡಿದ್ದರು.
ಹಾವೇರಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡರು.