ಹಾವೇರಿ: ಹಾವೇರಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ಬಸ್ ಅಪಘಾತಕ್ಕೆ ಚಾಲಕನ ನಿರ್ಲಕ್ಷೃವೇ ಕಾರಣ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದ್ದು, ಚಾಲಕ ಬ್ರೇಕ್ ಬದಲು ಎಕ್ಸಲರೇಟರ್ ಒತ್ತಿದ್ದೇ ಪ್ಲಾಟ್‌ಫಾರ್ಮ್ ಮೇಲೆ ಬಸ್ ನುಗ್ಗಲು ಕಾರಣ ಎಂದು ಸಾರಿಗೆ ಇಲಾಖೆ ಪತ್ತೆ ಹಚ್ಚಿದೆ. ಹಾಗಾಗಿ, ಚಾಲಕನ ಅಮಾನತಿಗೆ ಮುಂದಾಗಿದೆ.
ಬುಧವಾರ ಹಾವೇರಿ ಡೀಪೋದಲ್ಲಿ ವಾಹನವನ್ನು ತಪಾಸಣೆ ಮಾಡಿದ ನಂತರ ಚಾಲಕನಿಗೆ ಒಪ್ಪಿಸಲಾಗಿತ್ತು. ಬೆಳಗ್ಗೆ 6.45ರ ಸುಮಾರು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಹಾವೇರಿ- ಲಕ್ಷ್ಮೇಶ್ವರ ಮಾರ್ಗದ ಬಸ್ ಹಾವೇರಿ ಬಸ್ ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಪ್ಲಾಟ್‌ಫಾರ್ಮ್ ಬಳಿ ಬರುತ್ತಿದ್ದಂತೆ ಚಾಲಕ ಮಂಜುನಾಥ ಬ್ರೇಕ್ ಒತ್ತುವ ಬದಲು ಎಕ್ಸಲರೇಟರ್ ಒತ್ತಿದ್ದಾನೆ. ಇದರಿಂದ ಅಪಘಾತ ಸಂಭವಿಸಿ ಸವಣೂರಿನ ಎರಡೂವರೆ ವರ್ಷದ ಮಗು ಹಜರತ್ ಅಲಿ ರಾಯಚೂರ ಮೃತಪಟ್ಟಿದೆ.
ಉಳಿದ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಚಾಲಕ ಮದ್ಯ ಸೇವಿಸಿರಲಿಲ್ಲ. ಚಾಲಕನ ನಿರ್ಲಕ್ಷೃ ಕಂಡುಬಂದ ಹಿನ್ನೆಲೆ ಆತನ ಅಮಾನತಿಗೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ತನಿಖೆಯೂ ಮುಂದುವರಿದಿದೆ ಎಂದು ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಮೃತ ಮಗುವಿನ ಕುಟುಂಬದವರಿಗೆ 25 ಸಾವಿರ ರೂ. ತುರ್ತು ಪರಿಹಾರ ನೀಡಲಾಗಿದೆ. ಬಳಿಕ ಮತ್ತೆ 25 ಸಾವಿರ ರೂ. ಪರಿಹಾರ ನೀಡಲಾಗುವುದು. ನ್ಯಾಯಾಲಯ ತೀರ್ಪು ನೀಡಿದ ಬಳಿಕ ಮತ್ತಷ್ಟು ಪರಿಹಾರ ನೀಡಲಾಗುತ್ತದೆ. ಗಾಯಾಳುಗಳಿಗೆ ತಲಾ 5 ಸಾವಿರ ರೂ. ಪರಿಹಾರ ನೀಡಲಾಗಿದೆ.
ಎಲ್ಲ ಡಿಪೋಗಳಿಗೆ ಎಚ್ಚರಿಕೆ ನೀಡಲಾಗಿದೆ. ಬಸ್ ನಿಲ್ದಾಣ ಹಾಗೂ ನಗರ, ಜನವಸತಿ ಪ್ರದೇಶದಲ್ಲಿ ಬಸ್ ಚಾಲಕರು ನಿಧಾನವಾಗಿ ಚಲಾಯಿಸಲು ಸೂಚಿಸಲಾಗಿದೆ. ಜನರೂ ಸಹಕರಿಸಬೇಕು. ಅವಸರ ಮಾಡದೇ ಬಸ್ ನಿಲ್ಲುವವರೆಗೆ ಕಾಯಬೇಕು. ಅಗತ್ಯ ಸುರಕ್ಷತೆ ವಹಿಸಬೇಕು ಎಂದು ವಿಜಯಕುಮಾರ ಮನವಿ ಮಾಡಿದ್ದಾರೆ.
ಚಾಲಕ ಮಂಜುನಾಥ ಎಂಟು ತಿಂಗಳ ಹಿಂದೆಯಷ್ಟೇ ಚಾಲಕನಾಗಿ ಸೇವೆಗೆ ಹಾಜರಾಗಿದ್ದ. ನಿಯಮದ ಪ್ರಕಾರ ಈತನನ್ನು ನೇಮಕ ಮಾಡಲಾಗಿತ್ತು. ಒಂದು ವರ್ಷದವರೆಗೆ ತರಬೇತುದಾರ ಚಾಲಕ ಎಂದು ಕರೆಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಶಾಸಕರ ಭೇಟಿಗೆ ಸಂಬಂಧಿಕರ ಆಗ್ರಹ
ಹಾವೇರಿ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಅಪಘಾತದಿಂದ ಸವಣೂರ ಪಟ್ಟಣದ ಜೋಶಿ ಓಣಿ ನಿವಾಸಿ ಎರಡೂವರೆ ವರ್ಷದ ಮಗು ಹಜರತ್ ಅಲಿ ರಾಯಚೂರ ಮೃತಪಟ್ಟ ಬಳಿಕ ಸ್ಥಳೀಯ ಶಾಸಕ ಯಾಸೀರ್‌ಖಾನ್ ಪಠಾಣ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಸೇರಿದಂತೆ ಯಾವ ಜನಪ್ರತಿನಿಧಿಗಳೂ ಮೃತ ಬಾಲಕನ ಮನೆಗೆ ಭೇಟಿ ನೀಡಿಲ್ಲ.
ಮೃತ ಮಗುವಿನ ತಂದೆಗೆ ಮೂರು ವರ್ಷದ ಬಳಿಕ ಮಗು ಜನಿಸಿತ್ತು. ಇದೀಗ ಆತನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸಾರಿಗೆ ಸಂಸ್ಥೆ 25 ಸಾವಿರ ರೂ. ಪರಿಹಾರ ಮಾತ್ರ ನೀಡಿದೆ. ಮಗುವಿನ ತಂದೆ ಗೋವಾದಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. ಉಪ ಚುನಾವಣೆ ಸಂದರ್ಭದಲ್ಲಿ ಗೋವಾದಿಂದ ಸವಣೂರಿಗೆ ಬಂದು ಮತ ಚಲಾಯಿಸಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಶಾಸಕರು ಆಗಮಿಸಬೇಕು. ರಾಜ್ಯ ಸರ್ಕಾರದಿಂದ ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಮೃತ ಮಗುವಿನ ಸಂಬಂಧಿಕರಾದ ನಯೀಮ್ ಹುಲಗೂರ, ಭಾಷಾಲಾಲ್ ರಾಯಚೂರ ಆಗ್ರಹಿಸಿದ್ದಾರೆ.