Haveri, BJP, Rajyasbha, Member, Pro.M.Nagaraj, Sanman, 
ಹಾವೇರಿ

ಸಂಘದ ಶಿಸ್ತಿನ ಸಿಪಾಯಿ ಪ್ರೊ.ಮಾ.ನಾಗರಾಜ; ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿಕೆ

ಹಾವೇರಿ: ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯವಾಗಿ ಸಂಘಟನೆ ಮಾಡಿ, ಸಂಘದ ಗರಡಿಯಲ್ಲಿ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸುತ್ತಿರುವ ಪ್ರೊ.ಮಾ.ನಾಗರಾಜ ಅವರನ್ನು ಭಾಜಪಾ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ನಮ್ಮ ಪಕ್ಷದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರೊ.ಮಾ.ನಾಗರಾಜ ಅವರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಜನಪರವಾದ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಪ್ರೊ.ನಾಗರಾಜ ಅವರು, ಎಲ್ಲ ಸಮುದಾಯದವರ ಜತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷದ ಜಿಲ್ಲಾ ಕಾರ್ಯಾಲಯಗಳ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾವೇರಿ ಜಿಲ್ಲಾ ಕಾರ್ಯಾಲಯ ನಿರ್ಮಾಣದಲ್ಲೂ ಇವರ ಪಾತ್ರ ಪ್ರಮುಖವಾಗಿದ್ದು, ಇದೇ ಕಾರ್ಯಾಲಯದಲ್ಲಿ ಇಂದು ಅವರನ್ನು ಸನ್ಮಾನಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ರಾಜ್ಯಸಭಾ ಸದಸ್ಯ ಪ್ರೊ.ಮಾ.ನಾಗರಾಜ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೆಪಿಎಸ್ಸಿ ಆಯೋಗದ ಸದಸ್ಯರಾಗಿ ಜನರ ಸೇವೆ ಮಾಡುವ ಸೌಭಾಗ್ಯ ನನ್ನದಾಗಿತ್ತು. ರಾಜ್ಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯಗಳನ್ನು ನಿರ್ಮಾಣ ಮಾಡಿಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಂಘ ಪರಿವಾರ ಹಾಗೂ ಬಿಜೆಪಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಪದಾಧಿಕಾರಿಗಳು ಪ್ರೊ.ಮಾ.ನಾಗರಾಜ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಲಿಂಗರಾಜ ಚಪ್ಪರದಳ್ಳಿ, ಶಿವಲಿಂಗಪ್ಪ ತಲ್ಲೂರು, ಗವಿಸಿದ್ದಪ್ಪ ದ್ಯಾಮಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೀಲಪ್ಪ ಚಾವಡಿ, ಸಂತೋಷ ಆಲದಕಟ್ಟಿ, ಸಿದ್ದಪ್ಪ ಚಿಕ್ಕಬಿದರಿ, ನಂಜುಂಡೇಶ ಕಳ್ಳೇರ, ವಿಜಯಕುಮಾರ ಚಿನ್ನಿಕಟ್ಟಿ, ನಿರಂಜನ ಹೇರೂರು, ಗಂಗಾಧರ ಬಾಣದ, ಕಿರಣ ಕೊಳ್ಳಿ, ಮಾರುತಿ ಗೊರವರ, ಬಸವರಾಜ ಕೋಳಿವಾಡ, ಬಸವರಾಜ ಕಳಸೂರ, ಕಲ್ಯಾಣಕುಮಾರ ಶೆಟ್ಟರ, ಜಗದೀಶ ಕನವಳ್ಳಿ, ಲತಾ ಬಡ್ನಿಮಠ, ರೋಹಿಣಿ ಪಾಟೀಲ, ಮಂಜುಳಾ ಕರಬಸಮ್ಮನವರ, ಇತರರು ಉಪಸ್ಥಿತರಿದ್ದರು.