haveri, BJP, Protest, CJP,  
ಹಾವೇರಿ

ಭಾರತದ ವರ್ಚಸ್ಸು ಕುಗ್ಗಿಸುವ ಹುನ್ನಾರ; ಕಾಂಗ್ರೆಸ್, ಎಡಪಕ್ಷಗಳ ವಿರುದ್ಧ ಬಿ.ಸಿ.ಪಾಟೀಲ ವಾಗ್ದಾಳಿ; ಬಿಜೆಪಿಯಿಂದ ಮಾನವ ಸರಪಳಿ ನಿರ್ಮಿಸಿ ಆಕ್ರೋಶ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಜಗತ್ತಿನ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಹಾಗೂ ಭಾರತದ ವರ್ಚಸ್ಸನ್ನು ಕುಗ್ಗಿಸುವ ಹುನ್ನಾರವನ್ನು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮಾಡುತ್ತಿವೆ. ಕಾಂಗ್ರೆಸ್, ಟಿಎಂಸಿ, ಡಿ.ಎಂ.ಕೆ, ಆಮ್ ಆದ್ಮಿ, ಸಮಾಜವಾದಿ ಪಕ್ಷಗಳು ಒಗ್ಗೂಡಿ ಜಿರಳೆ ಪಾರ್ಟಿ ಕಟ್ಟಿಕೊಂಡು ದಂಗೆ ಎಬ್ಬಿಸಲು ಸರ್ಕಸ್ ಮಾಡುತ್ತಿವೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹಾಗೂ ಎಡಪಂಥೀಯ ಪಕ್ಷಗಳು ಹೋರಾಟದ ಹೆಸರಿನಲ್ಲಿ ದಿಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕಿ, ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಹೊರಟಿರುವ ವಿಪಕ್ಷಗಳ ನಡೆ ಖಂಡಿಸಿ ಯೂತ್ ಫಾರ್ ನೇಷನ್ ಹಾವೇರಿ ಘಟಕದ ನೇತೃತ್ವದಲ್ಲಿ ಶುಕ್ರವಾರ ನಗರದ ಜೆ.ಪಿ. ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ವಿಪಕ್ಷಗಳ ನಡೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನೆಯಲ್ಲಿ ಬಿ.ಸಿ.ಪಾಟೀಲ ಮಾತನಾಡಿದರು.
ಅಂತಾರಾಷ್ಟ್ರೀಯ ಭಯೋತ್ಪಾದಕರನ್ನು ಸೇರಿಸಿಕೊಂಡು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯನ್ನು ಕಟ್ಟಿದ್ದಾರೆ. ಭಾರತದಲ್ಲಿ ಕಾಂಗ್ರೆಸ್ ಮತ್ತು ಎಡ ಪಂಥಿಯರಿಗೆ ಮುಖಭಂಗವಾಗಿದೆ. ಇದೀಗ ಜಿರಳೆ ಜನತಾ ಪಾರ್ಟಿಯ ನೆರಳಲ್ಲಿ ಎಡಪಂಥೀಯ ಪಕ್ಷಗಳೆಲ್ಲರೂ ಜಿರಳೆ ಆಗಿದ್ದಾರೆ. ಕಾಕ್ರೋಚ್ ಕಾಂಗ್ರೆಸ್ ಪಾರ್ಟಿ, ಕಾಕ್ರೋಚ್ ಆಮ್ ಆದ್ಮಿ, ಕಾಕ್ರೋಚ್ ಟಿಎಂಸಿ, ಡಿಎಂಕೆ ಹೀಗೆ ಹೆಸರು ಇಟ್ಟುಕೊಳ್ಳಬಹುದಿತ್ತು. ಮುಖ ತೋರಿಸುವ ಶಕ್ತಿ ಇವರಿಗೆ ಇಲ್ಲ ಎಂದು ಕಿಡಿಕಾರಿದರು.
ಹಿಟ್ ಮತ್ತು ಮಾರ್ಟಿನ್ ನಮ್ಮ ದೇಶದ ಯುವ ಜನತೆಯಲ್ಲಿ ಇದೆ. ಈ ಹೊಲಸು ಜಿರಳೆಗಳನ್ನು ಸತ್ಯನಾಶ ಮಾಡುವ ಶಕ್ತಿ ಯುವ ಜನರಲ್ಲಿದೆ. ಮೋದಿ ಅವರಿಗೆ ಸ್ವಂತ ಮನೆ, ಕಾರು, ಬಂಗ್ಲೆ, ಆಸ್ತಿ ಏನೂ ಇಲ್ಲ. ಇಡೀ ದೇಶವೇ ನನ್ನ ಕುಟುಂಬ, ಇಡೀ ದೇಶದ ಮಕ್ಕಳೇ ನನ್ನ ಮಕ್ಕಳು ಎಂದು ಅವರು ತಿಳಿದಿದ್ದಾರೆ. ಯುವ ಜನತೆ ಎಚ್ಚೆತ್ತುಕೊಂಡು ವಿಕೃತ ಮನಸ್ಸಿನ ಸಂಘಟನೆಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಬಿ.ಸಿ.ಪಾಟೀಲ ಕರೆ ನೀಡಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ನೀಟ್ ಪರೀಕ್ಷೆ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ರಾಷ್ಟ್ರದ್ರೋಹಿಗಳ ಜತೆಗೆ ಸೇರಿ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಡಾ.ಬಸವರಾಜ ಕೇಲಗಾರ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಕಿರಣ ಕೊಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಸಂತೋಷ ಆಲದಕಟ್ಟಿ, ಸಿದ್ದಣ್ಣ ಚಿಕ್ಕಬಿದರಿ, ನಿರಂಜನ ಹೇರೂರ, ಕಿರಣಕುಮಾರ ಕೋಣನವರ, ಗಂಗಾಧರ ಬಾಣದ, ವೆಂಕಟೇಶ ನಾರಾಯಣಿ, ನೀಲಪ್ಪ ಚಾವಡಿ, ನಿಂಗಪ್ಪ ಬಟ್ಟಲಕಟ್ಟಿ, ಮುರಿಗೆಪ್ಪ ಶೆಟ್ಟರ್, ಡಿ.ಎಸ್.ಮಾಳಗಿ, ಶಿವಲಿಂಗಪ್ಪ ತಲ್ಲೂರ, ವಿಜಯಕುಮಾರ ಚಿನ್ನಿಕಟ್ಟಿ, ಪರಮೇಶಪ್ಪ ಮೇಗಳಮನಿ, ಮೃತ್ಯುಂಜಯ ಮುಷ್ಠಿ, ರುದ್ರೇಶ ಚಿನ್ನಣ್ಣನವರ, ಪ್ರಭು ಹಿಟ್ನಳ್ಳಿ, ಚಂದ್ರಪ್ಪ ಹರಿಜನ, ಕಲ್ಯಾಣಕುಮಾರ ಶೆಟ್ಟರ, ಸಾಗರ ಪೊಲೀಸ್‌ಗೌಡ್ರ, ರೋಹಿಣಿ ಪಾಟೀಲ, ಲತಾ ಬಡ್ನಿಮಠ, ಮಂಜುಳಾ ಕರಬಸಮ್ಮನವರ, ಸುಜಾತಾ ಆರಾಧ್ಯಮಠ, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
"

ಪ್ರತಿಭಟನೆ ಸಂವಿಧಾನ ಬದ್ಧವಾದ ಹಕ್ಕು. ಪ್ರತಿಭಟನೆ ಮಾಡಲು ಯಾರೂ ಬೇಡ ಎನ್ನುವುದಿಲ್ಲ. ಆದರೆ, ಪವಿತ್ರವಾದ ಸಂಸತ್ ಭವನದ ಮೇಲೆ ಮುತ್ತಿಗೆ ಹಾಕಿ ದಾಳಿ ನಡೆಸುವುದು ಸರಿಯಲ್ಲ. ಕಾಂಗ್ರೆಸ್‌ನ ರಾಹುಲ್‌ಗಾಂಧಿ, ಅರವಿಂದ ಕೇಜ್ರಿವಾಲ್, ಅಖಿಲೇಶ ಯಾದವ, ಮಮತಾ ಬ್ಯಾನರ್ಜಿ ಹೀಗೆ ಎಡಪಂಥಿಯರು ಸೇರಿ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿ ಅವರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.

— ಅರುಣಕುಮಾರ ಪೂಜಾರ, ಮಾಜಿ ಶಾಸಕ