Haveri, BJP, Office, Shyam Prasad Mukharji, Smarane,
ಹಾವೇರಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು ದೇಶದ ಏಕತೆಗಾಗಿ ತಮ್ಮನ್ನು ಅರಸಿಕೊಂಡು ಬಂದಿದ್ದ ಕೇಂದ್ರ ಸರ್ಕಾರದ ಮಂತ್ರಿ ಸ್ಥಾನವನ್ನು ಬದಿಗೊತ್ತಿ, ನೆಹರು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬಂದು ಜಮ್ಮು-ಕಾಶ್ಮೀರ ಪಾದಯಾತ್ರೆ ಕೈಗೊಂಡಿದ್ದರು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ 73ನೇ ಬಲಿದಾನ ದಿನಾಚರಣೆ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.
ಮುಖರ್ಜಿ ಅವರು 34ನೇ ವಯಸ್ಸಿನಲ್ಲಿಯೇ ಉಪಕುಲಪತಿಯಾಗಿ ಆಯ್ಕೆ ಆಗಿದ್ದರು. ಶ್ರೀನಗರದಲ್ಲಿ ಭಾರತೀಯ ರಾಷ್ಟ್ರೀಯ ಧ್ವಜ ಹಾರಿಸುತ್ತೇನೆಂದು ಕಾಶ್ಮೀರಕ್ಕೆ ಹೋದಾಗ ಅವರನ್ನು ಬಂಧಿಸಲಾಯಿತು. ಅವರು ಈ ದೇಶದಲ್ಲಿ ಒಂದೇ ಕಾನೂನು ಒಂದೇ ಧ್ವಜ ಇರಬೇಕೆಂದು ಪ್ರತಿಪಾದಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ಕಲಂ ರದ್ದುಪಡಿಸಬೇಕು ಎಂದು ತೀವ್ರ ಹೋರಾಟ ನಡೆಸುತ್ತಿದ್ದರು. ಜಮ್ಮು-ಕಾಶ್ಮೀರದ ಜೈಲಿನಲ್ಲಿ ಅವರು ನಿಗೂಡವಾಗಿ ಕೊನೆ ಉಸಿರು ಎಳೆದರು ಎಂದು ಸ್ಮರಿಸಿದರು.
ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಮುಖರ್ಜಿ ಅವರೊಬ್ಬ ನಿಷ್ಟಾವಂತ ದೇಶಪ್ರೇಮಿಯಾಗಿದ್ದರು. ನಮ್ಮ ಕಾರ್ಯಕರ್ತರು ಸೇರಿದಂತೆ ನಾವೆಲ್ಲರೂ ಇಂತಹ ದೇಶಪ್ರೇಮಿಗಳ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಕೊಳ್ಳೋಣ ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ ಮಾತನಾಡಿದರು.
ಸಭೆಯಲ್ಲಿ ಪ್ರಮುಖರಾದ ನಾಗೇಂದ್ರ ಕಟಕೋಳ, ಡಿ.ಎಸ್.ಮಾಳಗಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ, ಕಲ್ಯಾಣಕುಮಾರ ಶೆಟ್ಟರ, ಸಿದ್ದು ಚಿಕ್ಕಬಿದರಿ, ಶಿವಲಿಂಗಪ್ಪ ತಲ್ಲೂರು, ಕಿರಣ ಕೊಳ್ಳಿ, ಮಾರುತಿ ಗೋರವರ, ನಿರಂಜನ ಹೆರೂರ, ವಿಜಯಕುಮಾರ ಚಿನ್ನಿಕಟ್ಟಿ, ಅಲ್ಲಾಭಕ್ಷ ತಿಮ್ಮಾಪುರ, ವೆಂಕಟೇಶ ನಾರಾಯಣ, ಮಂಡಲದ ರೈತ ಮೋರ್ಚಾ ಅಧ್ಯಕ್ಷ ಶಿವಾನಂದ ಕಟಗಿ, ಅನುಪಮಾ ವಾಲಿಶೆಟ್ಟರ, ವಿದ್ಯಾ ನರಗುಂದ, ಪುಷ್ಪಾ ಚಕ್ರಸಾಲಿ, ಲಲಿತಾ ಗುಂಡೇನಹಳ್ಳಿ, ಪ್ರವೀಣ ಶೆಟ್ಟರ, ಹನುಮಂತಪ್ಪ ದಾಸರ, ಆಂಜನೇಯ ಈಳಗೇರ, ಇತರರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಚಾವಡಿ ಸ್ವಾಗತಿಸಿದರು. ನಂಜುಂಡೇಶ ಕಳ್ಳೇರ ವಂದಿಸಿದರು.