Haveri, BJP, MP Bommai, Joshi, SIR, Meeting,  
ಹಾವೇರಿ

ಎಸ್‌ಐಆರ್ ರಾಜ್ಯ ಸರ್ಕಾರಿ ನೌಕರರ ಕೈಯಲ್ಲಿದೆ; ಡಿಕೆಶಿ ಸಿಎಂ ಆದ ಮೇಲೆ ಪ್ರಕ್ರಿಯೆ ಅಪಾಯಕಾರಿ ಆಗಿದೆ; ಸಂಸದ ಬಸವರಾಜ ಬೊಮ್ಮಾಯಿ ಆರೋಪ

ಹಾವೇರಿ: ಮತದಾರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಂಪೂರ್ಣ ಪ್ರಕ್ರಿಯೆಯು ರಾಜ್ಯ ಸರ್ಕಾರಿ ನೌಕರರ ಕೈಯಲ್ಲಿದೆ. ಅದರಲ್ಲೂ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾದ ಬಳಿಕ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಈ ಪ್ರಕ್ರಿಯೆಯು ಬಹಳ ಗಂಭೀರವಾಗಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಳಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶಾದ್ಯಂತ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ನಮಗೆ ಹೊಸದಾಗಿದ್ದು, ಪಕ್ಷದ ಕಾರ್ಯಕರ್ತರು ನಿರಂತರವಾಗಿ ಒಂದು ತಿಂಗಳ ಕಾಲ ಮೈಮುರಿದು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆಯುತ್ತಿರುವ ‘ಮ್ಯಾಪಿಂಗ್’ ಎಂದರೆ ಒಂದೇ ಹೆಸರು ಎರಡು ಬಾರಿ ಇರುವುದನ್ನು ಸಾಫ್ಟ್‌ವೇರ್ ಮೂಲಕ ತೆಗೆದುಹಾಕುವುದು. ‘ಪ್ರೊಜನಿ’ ಎಂದರೆ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು. ಅಧಿಕಾರಿಗಳ ಮೇಲೆ ಡಿಕೆಶಿ ಸರ್ಕಾರ ಯಾವ ರೀತಿಯ ಒತ್ತಡ ಹೇರುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಮತದಾರರ ಪಟ್ಟಿಯ ತಾಂತ್ರಿಕ ಪರಿಷ್ಕರಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ಮತಗಳು ಹೇಗೆ ಕಡಿತಗೊಳ್ಳುತ್ತಿವೆ ಮತ್ತು ಬೇರೆಯವರ ಮತಗಳು ಹೇಗೆ ಸೇರ್ಪಡೆಯಾಗುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಳೆದ ಚುನಾವಣೆಗಳಲ್ಲಿ ನಡೆದ ತಪ್ಪುಗಳನ್ನು ಸರಿಪಡಿಸಿ, ಮುಂಬರುವ ದಿನಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಲಿಂಗರಾಜ ಪಾಟೀಲ, ಪ್ರಮುಖರಾದ ದತ್ತಾತ್ರೇಯ, ಭರತ ಬೊಮ್ಮಾಯಿ, ಡಾ.ಬಸವರಾಜ ಕೇಲಗಾರ, ಜಯತೀರ್ಥ ಕಟ್ಟಿ, ಡಿ.ಎಸ್.ಮಾಳಗಿ, ಗವಿಸಿದ್ದಪ್ಪ ದ್ಯಾಮಣ್ಣವರ, ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳ ನಡೆಗೆ ಆಕ್ಷೇಪ
ಬಂಕಾಪುರದಲ್ಲಿ ಮಸೀದಿಯೊಂದರಲ್ಲಿ ನಡೆದ ಪ್ರಕ್ರಿಯೆಯ ಕುರಿತು ವಿಡಿಯೋ ಸಾಕ್ಷ್ಯಗಳನ್ನು ನೀಡಿದ್ದರೂ ಸಹ, ಜಿಲ್ಲಾಧಿಕಾರಿಗಳು ಅಲ್ಲಿ ಏನೂ ನಡೆದಿಲ್ಲ ಎಂದು ಹೇಳುತ್ತಿರುವುದನ್ನು ಬೊಮ್ಮಾಯಿ ಖಂಡಿಸಿದರು. ದೂರು ನೀಡಿದ ಬಳಿಕವೂ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸದೆ ಹೇಗೆ ಕ್ಲೀನ್ ಚಿಟ್ ನೀಡುತ್ತಾರೆ ಎಂದು ಆರೋಪಿಸಿದರು.
ಕಾರ್ಯಕರ್ತರಿಗೆ ಎಚ್ಚರಿಕೆ
ಮುಂದೆ ಎಂಎಲ್‌ಎ ಆಗಬೇಕು ಎಂದವರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ನಮ್ಮಲ್ಲಿ ಒಬ್ಬರು ಎಂಎಲ್‌ಎ ಆಗಲು ಸಾಧ್ಯ. ಇಲ್ಲದಿದ್ದರೆ ಬರೀ ಹೆಸರಷ್ಟೇ ಉಳಿಯುತ್ತದೆ. ಕಾರ್ಯಕರ್ತರು ಕೇವಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಥವಾ ಭಾಷಣ ಮಾಡುವುದನ್ನು ಬಿಟ್ಟು, ಕನಿಷ್ಠ ಒಂದು ತಿಂಗಳ ಕಾಲ ಕ್ಷೇತ್ರಗಳ ತಳಮಟ್ಟಕ್ಕೆ ಇಳಿದು ಕೆಲಸ ಮಾಡಬೇಕು. ಪ್ರತಿ ಊರು, ಪ್ರತಿ ಬೂತ್ ಮಟ್ಟದಲ್ಲಿ ಬಿಎಲ್‌ಎ-2 ಜತೆಗೆ ಐದಾರು ಜನರನ್ನು ಸೇರಿಸಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಬೊಮ್ಮಾಯಿ ಕರೆ ನೀಡಿದರು.