Haveri, BJP, 1975 Emergency, Karala Diwas,  
ಹಾವೇರಿ

ತುರ್ತು ಪರಿಸ್ಥಿತಿಗೆ ತಕ್ಕಪಾಠ ಕಲಿಸಿದ ಜನತೆ; ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತು; ಬಿಜೆಪಿ ಕರಾಳ ದಿನಾಚರಣೆಯಲ್ಲಿ ರವೀಶ ಕರ್ನೂರ ಹೇಳಿಕೆ

ಹಾವೇರಿ: ದೇಶದಲ್ಲಿ ಇಂದಿರಾ ಗಾಂದಿ ಅವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ಕಾಂಗ್ರೇಸ್ಸೇತರ ರಾಜಕೀಯ ಪಕ್ಷಗಳು ತಲೆ ಎತ್ತಿದ್ದವು. ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಪಕ್ಷವನ್ನು ದೇಶದ ಜನತೆ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದರು ಎಂದು ರವೀಶ ಕರ್ನೂರ ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುರ್ತು ಪರಿಸ್ಥಿತಿಯ ದಿನಗಳಲ್ಲಿ ಸಾರ್ವಜನಿಕರು, ಮುಖಂಡರು, ಪತ್ರಿಕಾ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು. ಯಾವುದೇ ಕಾರಣ ನೀಡದೇ ಮುಖಂಡರನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದರು. ಬಂಧಿಖಾನೆಯಲ್ಲಿ ಕಠೋರವಾದ ಶಿಕ್ಷೆ ಹಾಗೂ ಚಿತ್ರಹಿಂಸೆ ಕೊಟ್ಟಿದ್ದರು ಎಂದು ವಿವರಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದಂರ್ಭದಲ್ಲಿ ತಾವು ಅನುಭವಿಸಿದ ಅನುಭವವನ್ನು ಕಾರ್ಯಕರ್ತರ ಎದುರು ಸ್ಮರಿಸಿದರು.
ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ರಾಜ್ಯಸಭಾ ಸದಸ್ಯ ಪ್ರೊ.ಮಾ.ನಾಗರಾಜ, ಪ್ರಮುಖರಾದ ಮಂಜುನಾಥ ಓಲೆಕಾರ, ಗವಿಸಿದ್ದಪ್ಪ ದ್ಯಾಮಣ್ಣವರ, ಸಿದ್ದರಾಜ ಕಲಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೀಲಪ್ಪ ಚಾವಡಿ, ಸಂತೋಷ ಆಲದಕಟ್ಟಿ, ಸಿದ್ದಪ್ಪ ಚಿಕ್ಕಬಿದರಿ, ವಿಜಯಕುಮಾರ ಚಿನ್ನಿಕಟ್ಟಿ, ಲತಾ ಬಡ್ನಿಮಠ, ರೋಹಿಣಿ ಪಾಟೀಲ, ಮಂಜುಳಾ ಕರಬಸಮ್ಮನವರ, ಭಾಜಪಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ಬಸವರಾಜ ಕಳಸೂರ ಸ್ವಾಗತಿಸಿದರು. ನಂಜುಂಡೇಶ ಕಳ್ಳೇರ ವಂದಿಸಿದರು.