ಹಾವೇರಿ: ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗಧಿಪಡಿಸುವ ಅಧಿಕಾರವನ್ನು ಸರ್ಕಾರ ಕೊಡಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಿ, ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಪ್ರಗತಿಪರ ರೈತ ಮಹಿಳೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಆಗ್ರಹಿಸಿದರು.
ನಗರದ ಹಾನಗಲ್ಲ ರಸ್ತೆಯ ಭಗತ್‌ಸಿಂಗ್ ಪಿಯು ಕಾಲೇಜ್‌ನ ವಾರ್ಷಿಕೋತ್ಸವ ಮತ್ತು ಭಗತ್ ಪ್ರಥಮ ದರ್ಜೆ ಕಾಲೇಜ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ಮಕ್ಕಳು ಬೆಳೆಯಬೇಕು. ರೈತರೂ ಕೂಡ ಕೋಟಿಯಲ್ಲಿ ಮಾತನಾಡಬೇಕು. ರೈತನಿಗೂ ಸಮಾಜದಲ್ಲಿ ಎಲ್ಲ ರೀತಿಯ ಗೌರವ ಸಿಗಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡಲು ಸಮಾಜ ಹಿಂದೇಟು ಹಾಕಬಾರದು. ರೈತ ಮನಸ್ಸು ಮಾಡಿದರೆ ಕೇವಲ ಒಂದು ಎಕರೆಯಲ್ಲಿ ಕೋಟಿ ರೂ. ಗಳಿಸಬಹುದು. ನಾನು ರೈತನ ಮಗ/ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯನ್ನು ಯಾರೂ ಮರೆಯಬಾರದು ಎಂದರು.
ಭಗತ್‌ಸಿಂಗ್ ಪ್ರಥಮ ದರ್ಜೆ ಕಾಲೇಜ್ ಉದ್ಘಾಟನೆಯನ್ನು ಧಾರವಾಡದ ಜೀನಿಯಸ್ ಅಕಾಡೆಮಿ ಅಧ್ಯಕ್ಷ ಅಲ್ತಾಫ್ ಅಹ್ಮದ್ ಡುಮ್ಮಾಳ ನೆರವೇರಿಸಿ ಮಾತನಾಡಿದರು. ಭಗತ್ ಕಾಲೇಜ್ ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಸೇರಿದಂತೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದರು.
ಕಾಲೇಜ್ ಮುಖ್ಯ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ ಮಾತನಾಡಿ, ಮಹಾನ್ ದೇಶಭಕ್ತ ಭಗತ್‌ಸಿಂಗ್ ಹೆಸರನ್ನು ನಮ್ಮ ಸಂಸ್ಥೆಗೆ ಇಟ್ಟಿರುವುದು ಹೆಮ್ಮೆಯ ವಿಷಯ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಸತೀಶ ಕೇವಲ 30 ವರ್ಷದಲ್ಲಿ ಸಂಸ್ಥೆ ಕಟ್ಟಿ, 35 ಕುಟುಂಬಗಳಿಗೆ ಉದ್ಯೋಗ ಕೊಟ್ಟು, 500ಕ್ಕೂ ಅಧಿಕ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಸಂಸ್ಥಾಪಕ ಎಂ.ಬಿ.ಸತೀಶ ಮಾತನಾಡಿ ನಮ್ಮೆಲ್ಲ ಉಪನ್ಯಾಸಕರು ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಈ ವರ್ಷ ಸಂಪೂರ್ಣವಾಗಿ ಫಲಿತಾಂಶದ ಕಡೆ ಒತ್ತು ಕೊಟ್ಟಿದ್ದೇವೆ. ಉತ್ತಮ ಫಲಿತಾಂಶ ನೀಡುತ್ತೇವೆ ಎಂದರು.