ಹಾವೇರಿ: ಬೇಡ್ತಿ- ವರದಾ ನದಿ ಜೋಡಣೆಗೆ ಸಂಬಂಧಿಸಿದಂತೆ ಮುಂದಿನ ರೂಪುರೇಷೆ ಕುರಿತು ಚರ್ಚಿಸಲು ಜಿಲ್ಲೆಯ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಜ.26ರಂದು ಮಧ್ಯಾಹ್ನ 1 ಗಂಟೆಗೆ ನಗರದ ಹುಕ್ಕೇರಿ ಮಠದ ಆವರಣದಲ್ಲಿ ಪಕ್ಷಾತೀತ ಸಭೆ ಆಯೋಜಿಸಲಾಗಿದೆ.
ಈ ಸಭೆಗೆ ಜಿಲ್ಲೆಯ ಎಲ್ಲ ಮಠಾಧೀಶರು, ಹಾಲಿ, ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಕನ್ನಡಪರ, ರೈತರಪರ, ಮಹಿಳಾಪರ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಭಾಗವಹಿಸಬೇಕು. ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.