haveri, bedti- varada, 
ಹಾವೇರಿ

ಬೇಡ್ತಿ- ವರದಾ ಕಣ್ಣೊರೆಸುವ ಯೋಜನೆ ಆಗದಿರಲಿ; ಹಾವೇರಿ ಜಿಲ್ಲೆಯಲ್ಲಿ ಡ್ಯಾಂ ನಿರ್ಮಿಸಲಿ; ಮಾಜಿ ಸಂಸದ ಮಂಜುನಾಥ ಕುನ್ನೂರ ಆಗ್ರಹ

ಹಾವೇರಿ: ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಜಾರಿ ನಿಟ್ಟಿನಲ್ಲಿ ಈಗ ಡಿಪಿಆರ್(ವಿಸ್ತೃತ ಯೋಜನಾ ವರದಿ)ಗೆ ಅನುಮತಿ ಸಿಕ್ಕಿರುವುದು ಭರವಸೆ ಮೂಡಿಸಿದ್ದು, ಕಣ್ಣೊರೆಸುವ ಯೋಜನೆ ಇದಾಗಬಾರದು. ಹಾವೇರಿ ಭಾಗ ಸೇರಿದಂತೆ ಉತ್ತರ ಕರ್ನಾಟಕದ ರೈತರು, ಜನರಿಗೆ ನ್ಯಾಯ ದೊರಕಿಸುವ ಕೆಲಸ ಆಗಬೇಕು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಬೇಕು. ಡಿಪಿಆರ್ ಸರಿಯಾಗಿ ಆಗಬೇಕು. ಈಗಾಗಲೇ ಡಿಪಿಆರ್‌ನಲ್ಲಿ ಇರುವ ಪ್ರಕಾರ ಮುಂಡರಗಿ ಸಮೀಪದ ಹಿರೇವಡ್ಡಟ್ಟಿ ಬಳಿ ತುಂಗಭದ್ರಾ ನದಿಗೆ ಡ್ಯಾಂ ಕಟ್ಟಿದರೆ ಗದಗ ಜಿಲ್ಲೆಗೆ ಹೆಚ್ಚಿನ ಲಾಭ ಆಗುತ್ತದೆ. ಇದರಿಂದ ಹಾವೇರಿ ಜಿಲ್ಲೆಗೆ ನೀರು ಸಿಗುವುದಿಲ್ಲ. ಹಾಗಾಗಿ, ಹಾವೇರಿ ಭಾಗದಲ್ಲಿ ಡ್ಯಾಂ ನಿರ್ಮಿಸಿ ಆ ನೀರನ್ನು ಇಲ್ಲಿನ ರೈತರಿಗೆ ಕೊಡಬೇಕು. ಇಲ್ಲವೇ ಜಲಾಶಯ ಆದರೂ ನಿರ್ಮಿಸುವ ಕುರಿತು ಡಿಪಿಆರ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸ್ಪೀಕರ್, ಹಿರೇಕೆರೂರಿನ ಬಿ.ಜಿ.ಬಣಕಾರ ಈ ಭಾಗದ ನೀರಾವರಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ನಂತರ ಯಾರೂ ಹೆಚ್ಚಿನ ಆಸಕ್ತಿ ತೋರಲಿಲ್ಲ. ನಾನು 2005ರಲ್ಲಿ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ್ದೆ. 2010ರಲ್ಲಿ ರಾಜ್ಯ ಸರ್ಕಾರ ಒಪ್ಪಿದರೆ ಅನುಮತಿ ನೀಡುವುದಾಗಿ ಕೇಂದ್ರ ಹೇಳಿತ್ತು. ಆದರೆ, ಯಾವ ಸರ್ಕಾರಗಳೂ ಆಸಕ್ತಿ ತೋರಲಿಲ್ಲ. ಈ ಯೋಜನೆ ಆಗಲ್ಲ ಎಂದು ನಾನು ಹಿಂದೆ ಸರಿದಿದ್ದೆ. ಈಗ ಭರವಸೆ ಸಿಕ್ಕಿದೆ. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರ್‌ಖಾನ್ ಪಠಾಣ, ಇತರರು ಆಸಕ್ತಿ ತೋರಿದ್ದಾರೆ. ಈಗಲಾದರೂ ಸೂಕ್ತ ನಿರ್ಣಯ ಕೈಗೊಂಡು ಯೋಜನೆ ಜಾರಿಗೊಳಿಸಬೇಕಿದೆ ಎಂದರು.
ಪರಸರಕ್ಕೆ ತೊಂದರೆ ಆಗುತ್ತದೆ ಎಂದರೆ ಅದನ್ನು ಪರಿಶೀಲನೆ ಮಾಡೋಣ. ಯೋಜನೆ ಜಾರಿ ಆಗಬಾರದು ಎಂಬುವವರು 20 ಸಾವಿರ ಜನ ಸೇರಿಸಿದ್ದಾರೆ. ನಾವು ಎಷ್ಟು ಜನ ಸೇರಿಸಬೇಕು ಎಂಬುದನ್ನು ಇಲ್ಲಿನ ಜನರೇ ನಿರ್ಧರಿಸಬೇಕು. ಜ.26ರ ಸಭೆಗೆ ಪಕ್ಷಾತೀತವಾಗಿ ಎಲ್ಲ ಪಕ್ಷದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಈ ಯೋಜನೆ ಡಿಪಿಆರ್ ಮಾಡಲು ಮಲಪ್ರಭಾ ಮಂಡಳಿಗೆ ಕೊಟ್ಟಿದ್ದಾರೆ. ಧಾರವಾಡ ಹಾಗೂ ಶಿಗ್ಗಾಂವಿಯಲ್ಲಿ ಕಚೇರಿ ಇದೆ. ಡಿಪಿಆರ್ ಸಿದ್ಧಪಡಿಸಲು ಅಪ್ಪರ್ ತುಂಗಾ ಯೋಜನೆಗೆ ಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಮುಖರಾದ ಸೋಮಶೇಖರ ಕೊತಂಬರಿ, ಮಾಲತೇಶ ಪೂಜಾರ ಎಂ.ಎಚ್.ಮುಲ್ಲಾ, ಮರಿಗೌಡ ಪಾಟೀಲ, ಯಲ್ಲಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ, ಇತರರಿದ್ದರು.
ಪ್ರವಾಹಕ್ಕೆ ಪರಿಹಾರವಾಗಲಿ
ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುತ್ತದೆ. ಯೋಜನೆ ಜಾರಿಯಾದರೆ ಪ್ರವಾಹ ಹೆಚ್ಚಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುನ್ನೂರ, ಬೇಡ್ತಿ ನದಿಯಿಂದ ವರದಾ ನದಿಗೆ ಸುಮಾರು 25 ಕಿಮೀ ದೂರ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ. ವರದಾ ನದಿ ತೀರದಲ್ಲಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಆಗುತ್ತದೆ. ಆದರೆ ಸಾಕಷ್ಟು ಪ್ರಮಾಣದ ನೀರು ಸಿಗುವುದಿಲ್ಲ. ಇದಕ್ಕೆ ಡಿಪಿಆರ್‌ನಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಪಕ್ಷಾತೀತ ವಿಶೇಷ ಸಭೆ 26ರಂದು
ಪರಿಸರಕ್ಕೆ ಹಾನಿ ಆಗಲಿದೆ ಎಂದು ಯೋಜನೆಗೆ ಶಿರಸಿ ಭಾಗದಲ್ಲಿ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಡಿಪಿಆರ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. ಡಿಪಿಆರ್ ಸಿದ್ಧಗೊಂಡ ನಂತರ ಪರಿಸರಕ್ಕೆ ಹಾನಿ ಆಗುತ್ತದೆಯೋ ಇಲ್ಲವೋ ತಿಳಿಯುತ್ತದೆ. ಅದಕ್ಕೂ ಮುನ್ನವೇ ಯಾಕೆ ವಿರೋಧಿಸುತ್ತೀರಿ. ಸಮುದ್ರಕ್ಕೆ ಹೋಗುವ ಬೇಡ್ತಿ ನದಿಯ 300 ಟಿಎಂಸಿ ನೀರು ವರದೆಗೆ ಸೇರಿಸಿದರೆ ಈ ಭಾಗದ ರೈತರಿಗೆ ಅನುಕೂಲ ಆಗುತ್ತದೆ. ಈ ಯೋಜನೆ ವಿರೋಧಿಸುವುದನ್ನು ರೈತರು ಸಹಿಸಲ್ಲ. ಪರವಾಗಿ ನಿಲ್ಲುತ್ತೇವೆ.
ಯೋಜನೆಯ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ನಿರ್ಧರಿಸಲು ಜ.26ರಂದು ಮಧ್ಯಾಹ್ನ 2 ಗಂಟೆಗೆ ಹಾವೇರಿಯ ಹುಕ್ಕೇರಿ ಮಠದ ಆವರಣದಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಜಿಲ್ಲೆಯ ವಿವಿಧ ಮಠಾದೀಶರು, ಸಂಸದರು, ಎಲ್ಲ ಹಾಲಿ, ಮಾಜಿ ಶಾಸಕರು, ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮನವಿ ಮಾಡಿದರು.