Haveri, basaveshwara Nagar, PU College, Parisara Dina,  
ಹಾವೇರಿ

ಹಾವೇರಿ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

ಹಾವೇರಿ: ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಬಸವೇಶ್ವರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಲೇಜ್ ಆವರಣದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹಾಗೂ ಸಾಹಿತಿ ಡಾ.ಸತೀಶ ಕುಲಕರ್ಣಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಹೊಸಮಠದ ಶ್ರೀಗಳು, ಪ್ರತಿಯೊಬ್ಬ ಪ್ರಜೆಯೂ ಒಂದೊಂದು ಮರವನ್ನು ನೆಟ್ಟರೆ ನಮ್ಮ ದೇಶ ನಂದನವನದಂತೆ ಕಂಗೊಳಿಸುತ್ತದೆ. ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಪರಿಸರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿನಿಯರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್‌ನ ಪ್ರಾಚಾರ್ಯ ರವಿಕುಮಾರ ಅಂಬೋರೆ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಒಂದು ಸಸಿ ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಿವೃತ್ತ ಉಪನಿರ್ದೇಶಕ ಅಶೋಕ ಶಾಸ್ತ್ರಿ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಭೀಮಪ್ಪ ಮನಸಾನಿ, ಹಿರಿಯ ಉಪನ್ಯಾಸಕರಾದ ಕೆ.ಎನ್. ಗುದಗಿ, ಐ.ಡಿ.ಕೊರಗರ, ಎಸ್.ಬಿ.ದೊಡ್ಡಮನಿ, ಪ್ರಮೋದ ನಲವಾಗಿಲ, ಲಲಿತಾಬಾಯಿ ನರಗುಂದ, ನಂದಿನಿ ಪಾಟೀಲ, ವಿ.ವೈ.ಕಣಕಿ, ಡಾ.ರಮೇಶಕುಮಾರ, ಅತಿಥಿ ಉಪನ್ಯಾಸಕರು, ಸಿಬ್ಬಂದಿ, ಇತರರಿದ್ದರು.