Haveri, Banjara Samaja, MLA Rudrappa Lamani, Minister, Protest,
ಹಾವೇರಿ: ಬಂಜಾರ ಸಮಾಜದ ಏಕೈಕ ಕಾಂಗ್ರೆಸ್ ಶಾಸಕ, ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಬಂಜಾರ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟಿಸಲಾಯಿತು.
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹೊಸಮನಿ ಸಿದ್ದಪ್ಪ ವೃತ್ತ, ಪಿ.ಬಿ ರಸ್ತೆ, ಪ್ರವಾಸಿಮಂದಿರ, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಗುರುಭವನ ಮಾರ್ಗವಾಗಿ ಜೆಎಚ್ ಪಟೇಲ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ರುದ್ರಪ್ಪ ಲಮಾಣಿ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್‌ನ ಹೈಕಮಾಂಡ್‌ಗೆ ಆಗ್ರಹಿಸಿದರು. ರುದ್ರಪ್ಪ ಲಮಾಣಿ ಪರ ಘೋಷಣೆ ಕೂಗಿದರು. ಸ್ಥಳಕ್ಕಾಗಮಿಸಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಬಂಜಾರ ಸಂತ ಸೇವಾಲಾಲ ಸಂಘದ ಜಿಲ್ಲಾಧ್ಯಕ್ಷ ವಿಷ್ಣುಕುಮಾರ ನಾಯ್ಕ ಮಾತನಾಡಿ, ಶಾಸಕ ರುದ್ರಪ್ಪ ಲಮಾಣಿ. ಬ್ಯಾಡಗಿ ಹಾಗೂ ಹಾವೇರಿಯಲ್ಲಿ ಮೂರು ಭಾರಿ ಶಾಸಕರಾಗಿ ಆಯ್ಕೆಯಾದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಹಾಗಾಗಿ, ವಿಧಾನಸಭೆ ಉಪ ಸಭಾಧ್ಯಕ್ಷರನ್ನಾಗಿ ನೇಮಿಸಿತ್ತು. ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಸುಧೀರ್ ಲಮಾಣಿ ಮಾತನಾಡಿ, 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಬಂಜಾರ ಜನಾಂಗಕ್ಕೆ ಸಚಿವ ಸ್ಥಾನವನ್ನು ಕೋಡುತ್ತೇವೆ ಎಂದು ನಂಬಿಸಿದ್ದರು. ಬಳಿಕ ಅನಿವಾರ್ಯ ಕಾರಣಗಳಿಂದ ಸಚಿವ ಸ್ಥಾನ ಕೊಡಲಿಲ್ಲ. ಇದರಿಂದ ಸಮಸ್ತ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದೆ. ಕಳೆದ ವರ್ಷ ನಡೆದ ಶಿಗ್ಗಾಂವ, ದಾವಣಗೆರೆ, ಬಾಗಲಕೋಟೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಂಜಾರ ಸಮಾಜದವರು ಹೆಚ್ಚು ಮತಗಳನ್ನು ನೀಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಹಾಗಾಗಿ, ಕಾಂಗ್ರೆಸ್ ಹೈಕಮಾಂಡ್ ನಾಯಕರು ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸಿದರು.
ಆಲ್ ಇಂಡಿಯಾ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಐ.ಡಿ.ಲಮಾಣಿ, ಕರ್ನಾಟಕ ಸಂತ ಬಂಜಾರ ಸೇವಾಲಾಲ್ ಸಂಘದ ರಾಜ್ಯಾಧ್ಯಕ್ಷ ಜಯರಾಮ್ ಮಾಳಾಪುರ, ಮುತ್ತಪ್ಪ ಕೊರವರ, ತುಕ್ಕಪ್ಪ ಯಲ್ಲಾಪುರ, ನಿಂಗರಾಜ ನಾಯ್ಕ, ಸಂತೋಷ ಲಮಾಣಿ, ಪರಮೇಶ ಲಮಾಣಿ, ಜಯಪ್ಪ ಲಮಾಣಿ, ಸುಭಾಷ ಲಮಾಣಿ, ರವಿ ಲಮಾಣಿ, ಮಲ್ಲೇಶಪ್ಪ ಬಂಕಾಪುರ, ಶಂಕರ ಬಾಲಕ್ಕನವರ, ಗೀತಾ ಪ್ರಕಾಶ, ಬಂಜಾರ ಸಮಾಜ, ರುದ್ರಪ್ಪ ಲಮಾಣಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.