ಹಾವೇರಿ: ನಾಗರಿಕ ಸಮಾಜಕ್ಕೆ ಅಂಟಿರುವ ಶಾಪ ಈ ಬಾಲ್ಯವಿವಾಹ. ಮಕ್ಕಳು ಜಗತ್ತನ್ನು ಅರಿಯುವ ಮುನ್ನವೇ ಅವರ ಶಿಕ್ಷಣ, ಬಾಲ್ಯ ಹಾಗೂ ಸ್ವಾತಂತ್ರೃ ಕಸಿದುಕೊಳ್ಳುವ ಈ ಅನಿಷ್ಠ ಪದ್ಧತಿ ಜಿಲ್ಲೆಯಲ್ಲಿ ಈವರೆಗೆ ಕಡಿಮೆಯಾಗಿಲ್ಲ. ಇದರ ಜತೆಗೆ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ- 2012) ಪ್ರಕರಣಗಳೂ ಹೆಚ್ಚುತ್ತಿದ್ದು, ಪಾಲಕರಲ್ಲಿ ಆತಂಕದ ಛಾಯೆ ಮನೆ ಮಾಡಿದೆ.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 338 ಪೋಕ್ಸೋ ಪ್ರರಕಣಗಳು ದಾಖಲಾಗಿದ್ದು, ಪೋಕ್ಸೋ ಜತೆಗೆ ಬಾಲ್ಯ ವಿವಾಹ ಆರೋಪದಡಿ 94 ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ಇಲಾಖೆಗಳಿಂದ ಮೂರು ವರ್ಷದಲ್ಲಿ 139 ಬಾಲ್ಯ ವಿವಾಹಗಳನ್ನು ತಡೆದಿರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.
2023-24ರಲ್ಲಿ 90 ಪೋಕ್ಸೋ ಕೇಸ್ ಹಾಗೂ 19 ಬಾಲ್ಯ ವಿವಾಹ ಕೇಸ್ ದಾಖಲಾಗಿದ್ದು, 35 ಬಾಲ್ಯವಿವಾಹ ತಡೆಯಲಾಗಿತ್ತು. 2024-25ರಲ್ಲಿ 129 ಬಾಲ್ಯ ವಿವಾಹ ಹಾಗೂ 19 ಪೋಕ್ಸೋ ಜತೆಗೆ ಬಾಲ್ಯ ವಿವಾಹ ಕೇಸ್ ವರದಿಯಾಗಿದ್ದು, 54 ಬಾಲ್ಯವಿವಾಹ ತಡೆಯಲಾಗಿತ್ತು. ಪ್ರಸಕ್ತ ಸಾಲಿಲ್ಲಿ (2025-26) ಡಿಸೆಂಬರ್‌ವರೆಗೆ 119 ಪೋಕ್ಸೋ ಕೇಸ್, 34 ಬಾಲ್ಯವಿವಾಹಗಳು ನಡೆದಿದ್ದು, 50 ಬಾಲ್ಯವಿವಾಹ ತಡೆಗಟ್ಟಲಾಗಿದೆ. ಮಾರ್ಚ್ ಅಂತ್ಯದವರಗೆ ಈ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದ ಒಳಗಿನ ಗಂಡು ಮದುವೆ ಆಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಜಗತ್ತು ಎಷ್ಟೇ ಮುಂದುವರಿದರೂ ನಮ್ಮ ನಡುವೆಯೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾನವ ಸಮಾಜ ತಲೆ ತಗ್ಗಿಸುವಂಥದ್ದು. ಇದಕ್ಕೆ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರ ಹೊಣೆಯಾಗುವುದಿಲ್ಲ. ಸರ್ಕಾರದ ಪ್ರತಿಯೊಂದು ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಜತೆಗೆ ಪಾಲಕರು, ಶಿಕ್ಷಕರು ಕೈಜೋಡಿಸಿದರೆ ಇದನ್ನು ತಡೆಗಟ್ಟಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈ ನಿಟ್ಟಿನಲ್ಲಿ ತಳಮಟ್ಟದಲ್ಲಿ ಜನಜಾಗೃತಿ ಮೂಡಿಸಬೇಕಿದೆ. ಹಳ್ಳಿ ಹಳ್ಳಿಗಳಲ್ಲಿ ಇಂತಹ ಯಾವುದೇ ಪ್ರಕರಣ ಕಂಡು ಬಂದರೂ ನಾಗರಿಕರು ಜಾಗೃತರಾಗಬೇಕಿದೆ. ತಕ್ಷಣವೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ, ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಬೇಕಿದೆ.
ಪಿಡಿಒಗಳಿಗೆ ಜಿಪಂ ಸಿಇಒ ಖಡಕ್ ಸೂಚನೆ
ಮಕ್ಕಳ ರಕ್ಷಣೆಗಾಗಿ ಎಲ್ಲ ಪುನರ್ವಸತಿ ಕಾರ್ಯಕರ್ತರು, ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ಪಿಡಿಒ, ಅಧ್ಯಕ್ಷರು ಸೇರಿದಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್ ಬಾಲ್ಯ ವಿವಾಹ, ಪೋಕ್ಸೋ, ಬಾಲಗರ್ಭಿಣಿ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಖಡಕ್ ಸೂಚನೆ ನೀಡಿದ್ದಾರೆ. ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ವಿಷಯ ಗೊತ್ತಾದ ಕೂಡಲೇ, ಮೇಲಧಿಕಾರಿಗಳ ಗಮನಕ್ಕೆ ತಂದು ಅದನ್ನು ತಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಎಲ್ಲೆಡೆ ಮಕ್ಕಳ ಗ್ರಾಮಸಭೆಗಳನ್ನು ನಡೆಸಲು ನಿರ್ದೇಶಿಸಿದ್ದಾರೆ.
ಮೊಬೈಲ್‌ನಿಂದ ಕೇಸ್ ಹೆಚ್ಚಳ !
ಇತ್ತೀಚೆಗೆ ಪುಟಾಣಿ ಮಕ್ಕಳಿಂದ ಹಿಡಿದು ಶಾಲೆ- ಕಾಲೇಜ್‌ಗೆ ಹೋಗುವ ಮಕ್ಕಳು ಕೂಡ ಮೊಬೈಲ್ ಮಾಯಾಜಾಲಕ್ಕೆ ಸಿಲುಕಿದ್ದಾರೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ಅಪ್ಪ- ಅಮ್ಮ ಇಬ್ಬರೂ ದುಡಿಮೆಯಲ್ಲಿ ನಿರತರಾಗುತ್ತಿದ್ದಾರೆ. ಈ ನಡುವೆ ಮಕ್ಕಳಿಗೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ. ಈ ನಡುವೆ ಮಕ್ಕಳು ಮೊಬೈಲ್ ಹೆಚ್ಚು ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಪೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಿಂದ ಪರಿಚಯ ಸ್ನೇಹ ನಂತರ ಪ್ರೇಮ, ಪೋಕ್ಸೋ ಪ್ರಕರಣ ಆಗುವವರೆಗೆ ಹಲವು ಪಾಲಕರಿಗ ವಿಷಯ ಗೊತ್ತೇ ಇರುವುದಿಲ್ಲ. ಈ ಕುರಿತು ಪಾಲಕರು, ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳು, ಶಾಲಾ- ಕಾಲೇಜ್‌ಗಳಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ತಡೆಗಟ್ಟುವ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹ ನಡೆಯುತ್ತಿದ್ದರೆ ಮಕ್ಕಳ ಉಚಿತ ಸಹಾಯವಾಣಿ 1098 ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು.
ವರ್ಷ ಪೋಕ್ಸೋ ಕೇಸ್ ಪೋಕ್ಸೋ ಜತೆ ಬಾಲ್ಯ ವಿವಾಹ ತಡೆದ ಬಾಲ್ಯ ವಿವಾಹ
2025-26 (ಡಿಸೆಂಬರ್‌ವರೆಗೆ) 119 34 50
-------------------------------------------------------------------