haveri, APMC, Illeagle, Shops, Bundh,
ರಾಣೆಬೆನ್ನೂರ: ನಗರದ ಎಪಿಎಂಸಿ ಮುಖ್ಯ ಪ್ರಾಂಗಣ ಬಿಟ್ಟು ಇಲ್ಲಿನ ಪಿಬಿ ರಸ್ತೆಯ ನೆಹರು ಮಾರುಕಟ್ಟೆಯಲ್ಲಿ ರೈತರ ಬೆಳೆದ ಉತ್ಪನ್ನಗಳನ್ನು ಖರೀದಿಸಿ ಅನಧಿಕೃತವಾಗಿ ವ್ಯಾಪಾರ, ವಹಿವಾಟು ಮಾಡುತ್ತಿದ್ದ 9 ಅಂಗಡಿಗಳನ್ನು ಶನಿವಾರ ಬಂದ್ ಮಾಡುವ ಮೂಲಕ ಎಪಿಎಂಸಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಎಪಿಎಂಸಿ ಕಾನೂನಿನ ಪ್ರಕಾರ ಅಧಿಕೃತವಾಗಿ ಪರವಾನಗಿ ಪಡೆದ ವರ್ತಕರು ಎಪಿಎಂಸಿ ನಿಗದಿಪಡಿಸಿದ ಸ್ಥಳದಲ್ಲಿ ರೈತರ ಉತ್ಪನ್ನಗಳ ವ್ಯಾಪಾರ ವಹಿವಾಟು ಮಾಡಬೇಕು. ಈ ಆದೇಶ ಉಲ್ಲಂಘನೆ ಮಾಡಿ ನೆಹರು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ವರ್ತಕರ ಅಂಗಡಿಗಳನ್ನು ಶನಿವಾರ ಬೀಗ ಜಡಿಯುವ ಮೂಲಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎಪಿಎಂಸಿ ಅಧಿಕಾರಿಗಳು ಎತ್ತಿ ಹಿಡಿದಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ಅಂಗಡಿಗಳಿಗೆ ಬೀಗಮುದ್ರೆ ಹಾಕಿದ್ದಾರೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ., ಸಹಾಯಕ ಕಾರ್ಯದರ್ಶಿ ಪರಮೇಶ ನಾಯಕ, ಪೊಲೀಸರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ರಾಣೆಬೆನ್ನೂರ ನಗರದ ಎಪಿಎಂಸಿಯಲ್ಲಿ ವರ್ತಕರು ಅಧಿಕೃತವಾಗಿ ವ್ಯಾಪಾರ ವಹಿವಾಟು ಮಾಡಲು ಪರವಾನಗಿ ಪಡೆದಿದ್ದರು. ಆದರೆ, ಪರವಾನಗಿ ಪಡೆದ ವರ್ತಕರು ಮುಖ್ಯ ಪ್ರಾಂಗಣ ಬಿಟ್ಟು ನಗರದ ನೆಹರು ಮಾರುಕಟ್ಟೆಯಲ್ಲಿ ರೈತರ ಜತೆ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಇದನ್ನು ಗಮನಿಸಿದ ಎಪಿಎಂಸಿ ಅಧಿಕಾರಿಗಳು ಇದು ಅನಧಿಕೃತ ವ್ಯಾಪಾರ ವಹಿವಾಟು ಕೂಡಲೇ ನೀವು ಮುಖ್ಯ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ಮಾಡುವಂತೆ ನೋಟಿಸ್ ನೀಡಿ, ಸೂಚನೆ ನೀಡಿದ್ದರು. ಆದರೆ, ಎಪಿಎಂಸಿ ಅಧಿಕಾರಿಗಳು ಮಾತನ್ನು ಧಿಕ್ಕರಿಸಿ ಕೆಲ ವರ್ತಕರ ಎಪಿಎಂಸಿ ವಿರುದ್ಧ ನ್ಯಾಯಾಲಯ ಮೆಟ್ಟಿಲು ಏರಿದ್ದರು. ಎಪಿಎಂಸಿ ಪರ ತೀರ್ಪು ನೀಡಿರುವ ನ್ಯಾಯಾಲಯ, ಮುಖ್ಯ ಪ್ರಾಂಗಣದಲ್ಲೇ ವ್ಯಾಪಾರ ಮಾಡುವಂತೆ ಆದೇಶಿಸಿದೆ.