Ambigara Choudayya Peetha
ಹಾವೇರಿ: ತಾಲೂಕಿನ ನರಸೀಪುರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 2026ರ ಜ.14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ 2026 ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ಬೆಳಗ್ಗೆ 6 ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, 8 ಗಂಟೆಗೆ ಚೌಡಯ್ಯನವರ ಐಕ್ಯಮಂಟಪದ ಪೂಜೆ, 10 ಗಂಟೆಗೆ ರಕ್ತದಾನ ಶಿಬಿರ, 11 ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರತಿಭಾ ಪುರಸ್ಕಾರ, ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಸಂಜೆ 7ಕ್ಕೆ ತಿಹಾಸಿಕ ಗಂಗಾರತಿ, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜ.15ರಂದು ಬೆಳಗ್ಗೆ 8 ಗಂಟೆಗೆ ಧರ್ಮ ಧ್ವಜಾರೋಹಣ, ನಂತರ ಧರ್ಮಸಭೆ ನಡೆಯಲಿದೆ. ಇದೇ ವೇಳೆ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದರು.
ಬೆಳಗ್ಗೆ 11 ಗಂಟೆಗೆ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ, ನಂತರ ನಮ್ಮ ಪೀಠಾರೋಹಣದ ದಶಮಾನೋತ್ಸವ ಕಾರ್ಯಕ್ರಮ, ಸಂಜೆ 5ಕ್ಕೆ ವಚನ ಗ್ರಂಥ ಮಹಾರಥೋತ್ಸವ ಜರುಗಲಿದೆ. ಈ ಬಾರಿಯ ರಾಜ್ಯ ಮಟ್ಟದ ಅಂಬಿಗರ ಚೌಡಯ್ಯ ವೀರ ಗಣಾಚಾರಿ ಮರಣೋತ್ತರ ಪ್ರಶಸ್ತಿಯನ್ನು ಕಲಬುರಗಿಯ ಬಂಡಾಯ ಸಾಹಿತಿ ಚಂದ್ರಣ್ಣ ವಾಲಿಕಾರ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಅಂಬಿಗರ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ, ಗೌರವಾಧ್ಯಕ್ಷ ಮಂಜುನಾಥ ಭೋವಿ, ಪ್ರಮುಖರಾದ ಬಸವರಾಜ ಕಳಸೂರ, ಕೃಷ್ಣಮೂರ್ತಿ ವಡ್ನಿಕೊಪ್ಪ, ಶಂಕರ ಸುತಾರ, ಕರಬಸಪ್ಪ ಹಳದೂರ, ದೇವರಾಜ ಸುಣಗಾರ, ಪ್ರಕಾಶ ಅಂಬಿಗೇರ, ಎನ್.ಎಂ.ಶೇಷಗಿರಿ, ಕೊಟ್ರೇಶ ಪೂಜಾರ, ಮಂಜುನಾಥ ಪುಟಗನಾಳ, ಅಣ್ಣಪ್ಪ ಚಕಾಪುರ, ರಾಜು ಜಾಡಮಲ್ಲಿ, ಹೊನ್ನಪ್ಪ, ಇತರರಿದ್ದರು.
ಪ್ರಾಧಿಕಾರ ರಚನೆ, ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಪ್ರಾಧಿಕಾರ ರಚಿಸುವುದರ ಜತೆಗೆ ಐಕ್ಯಮಂಟಪದ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸುವುದು, ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯಿಸಲಾಗುವುದು ಎಂದು ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.