Haveri, Akkialur, 200nd Round, Blood Donation, Police, Karabasappa Gondi,  
ಹಾವೇರಿ

200ನೇ ಬಾರಿಗೆ ರಕ್ತದಾನ ಮಾಡಿದ ಕಾನ್‌ಸ್ಟೆಬಲ್; ಅಕ್ಕಿಆಲೂರಿನ ಕರಬಸಪ್ಪ ಗೊಂದಿ ಕಾರ್ಯಕ್ಕೆ ಮೆಚ್ಚುಗೆ

ಹಾವೇರಿ: ರಕ್ತಸೈನಿಕರ ತವರೂರು ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಗ್ರಾಮದ ಕುಮಾರ ಮಹಾ ಶಿವಯೋಗಿಗಳ ಕಲ್ಯಾಣ ಮಂಟಪದಲ್ಲಿ ಸೋಮವಾರ ಪೊಲೀಸ್ ಕಾನ್‌ಸ್ಟೆಬಲ್ ಕರಬಸಪ್ಪ ಗೊಂದಿ 200ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿ ಎನಿಸಿದರು.
ಲಿಂಗೈಕ್ಯ ಚನ್ನವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಮತ್ತು ಶಿವಬಸವ ಮಹಾಸ್ವಾಮಿಗಳ ಮೌನ ಅನುಷ್ಠಾನ ಮುಕ್ತಾಯ ಸಮಾರಂಭದ ಅಂಗವಾಗಿ ಸ್ನೇಹಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾ ರಕ್ತಕೇಂದ್ರ ಹಿಮ್ಸ್ ಹಾವೇರಿ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಯಿತು.
ಸಮಾರಂಭದಲ್ಲಿ ಕರಬಸಪ್ಪ ಗೊಂದಿ ಇನ್ನೂರರ ಹೆಗ್ಗುರುತು ಹೆಸರಿನಡಿ 200ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದರು. 2010ರಿಂದ ಈವರೆಗೂ 181 ಬಾರಿ ರಕ್ತದ ಕೆನೆಕಣ, 18 ಬಾರಿ ಪೂರ್ಣ ಪ್ರಮಾಣದ ರಕ್ತ ಹಾಗೂ 1 ಬಾರಿ ಬಿಳಿರಕ್ತ ಕಣಗಳ ದಾನ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಲ್.ವೈ.ಶಿರಕೋಳ ಇನ್ನೂರರ ಹೆಗ್ಗುರುತು ಫಲಕ ಅನಾವರಣ ಮಾಡಿದರು. ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕ ಎಂ.ಎಂ.ಯಾದವಾಡ ರಕ್ತದಾನ ಮಾಹಿತಿ ಪೋಸ್ಟರ್ ಅನಾವರಣ ಮಾಡಿದರು.
ವೈಷ್ಣವಿ ರಿತ್ತಿ ಕಣ್ಣು ಮುಚ್ಚಿ ಎರಡನೂರರ ಮಾಹಿತಿ ಓದಿದರು. ಅಕ್ಕಿಆಲೂರಿನ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಡಾ.ಬಸವರಾಜ ತಳವಾರ, ಮನೋಹರ ಗೊಂದಿ, ಕುಸುಮಾ ಗೊಂದಿ, ಪಿ.ಆರ್.ಮಠ, ಮತ್ತಿತರರು ಉಪಸ್ಥಿತರಿದ್ದರು.
218 ಜನ ರಕ್ತಸೈನಿಕರು
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 130 ಜನರು ರಕ್ತದಾನ ಮಾಡಿದರು. ಇನ್ನೂರರ ಹೆಗ್ಗುರುತು ಕಾರ್ಯಕ್ರಮದ ಅಂಗವಾಗಿ ಒಟ್ಟು 4 ರಕ್ತದಾನ ಶಿಬಿರ ಆಯೋಜಿಸಿ 218 ಯುನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಈ ಮೂಲಕ 218 ಜನ ರಕ್ತ ಸೈನಿಕರಾದರು.