Haveri, Agriculture, Farmers, Seeds, Cultivation, Rainy Season,
ಹಾವೇರಿ: ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಮಳೆಗಾಲಕ್ಕೂ ಮುನ್ನವೇ ವಾಡಿಕೆಗಿಂತ ಹೆಚ್ಚಿನ ಮುಂಗಾರು ಪೂರ್ವ ಮಳೆ ಸುರಿದಿರುವುದು ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಜತೆಗೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆ ಹಿನ್ನೆಲೆ ಮುಂಗಾರು ಹಂಗಾಮಿಗೆ ಜಿಲ್ಲೆಯ ಅನ್ನದಾತ ಸಜ್ಜಾಗುತ್ತಿದ್ದಾನೆ. ಬೀಜ, ರಸಗೊಬ್ಬರ ದಾಸ್ತಾನಿಗೆ ಮುಂದಾಗಿದ್ದಾನೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3,28,956 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 2,70,010 ಹೆಕ್ಟೇರ್ ಮಳೆ ಆಶ್ರಿತ ಮತ್ತು 58,946 ಹೆಕ್ಟೇರ್ ನೀರಾವರಿ ಭೂಮಿ ಹೊಂದಿದೆ. ಸೋಯಾಬೀನ್, ಮೆಕ್ಕೆಜೋಳ, ಭತ್ತ, ಜೋಳ, ಸಜ್ಜೆ, ತೊಗರಿ, ಹುರಳಿ, ಉದ್ದು, ಅಲಸಂದಿ, ಅವರೆ, ಶೇಂಗಾ, ಸೂರ್ಯಕಾಂತಿ, ಎಳ್ಳು, ಸಾಸಿವೆ, ಹತ್ತಿ, ಕಬ್ಬು, ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ರೈತರು ಈ ಬಾರಿ ಸೋಯಾಬೀನ್ ಬಿತ್ತಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಹೊಲ ಹದಗೊಳಿಸಿಕೊಂಡು ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಬಿತ್ತನೆಗಾಗಿ ಗೊಬ್ಬರ ಹಾಗೂ ಬೀಜ ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ. ಜಿಲ್ಲೆಯಾದ್ಯಂತ ಬೀಜ ಖರೀದಿಸಲು ಮುಗಿಬೀಳುತ್ತಿದ್ದಾರೆ.
ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರ ಜತೆಗೆ ವ್ಯವಸಾಯ ಸೇವಾ ಸೊಸೈಟಿ ಹಾಗೂ ಖಾಸಗಿ ಮಳಿಗೆಗಳ ಮೂಲಕ ಡಿಎಪಿ, ಕಾಂಪ್ಲೆಕ್ಸ್, ಇತರೆ ಗೊಬ್ಬರಗಳ ಮಾರಾಟ ಮಾಡಲಾಗುತ್ತಿದೆ. ಹಾವೇರಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಲು ರೈತರು ಮುಗಿಬೀಳುತ್ತಿದ್ದಾರೆ. ಶೇಂಗಾ, ಸೋಯಾಬಿನ್ ಬೀಜಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ರೈತರು ಸರತಿ ಸಾಲಿನಲ್ಲಿ ನಿಂತು ಬೀಜ ಖರೀದಿಗೆ ಮುಂದಾಗಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಕೃಷಿ ಇಲಾಖೆ ಸೂಕ್ತ ವ್ಯವಸ್ಥೆ ಮಾಡದೇ, ಮೊದಲೇ ಅಗತ್ಯ ಮಾಹಿತಿ ನೀಡದ ಕಾರಣ ಜನದಟ್ಟಣೆ ಹೆಚ್ಚಾಗುತ್ತಿದೆ. ಕೌಂಟರ್‌ಗಳನ್ನು ಹೆಚ್ಚಿಸಿ, ಕುಡಿಯಲು ನೀರು, ನೆರಳಿನ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ರೈತರಿಂದ ಕೇಳಿ ಬಂದಿದೆ.
ಮುಂಗಾರು ಬೀಜದ ದಾಸ್ತಾನು ವಿವರ (ಕ್ವಿಂಟಾಲ್‌ಗಳಲ್ಲಿ)
------------------------------
ರಸಗೊಬ್ಬರ ಅಂಕಿ- ಸಂಖ್ಯೆ (ಮೆಟ್ರಿಕ್ ಟನ್‌ನಲ್ಲಿ)
ಹೆಸರು ಮಾರಾಟ ಆಗಿರುವುದು ದಾಸ್ತಾನು
ಕಾಂಪ್ಲೆಕ್ಸ್ 15,041 19,482
----------------------------------
"
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸಾಕಾಗುವಷ್ಟು ಬೀಜ, ಗೊಬ್ಬರವನ್ನು ಕೃಷಿ ಇಲಾಖೆ ಸಂಗ್ರಹ ಮಾಡಬೇಕು. ಬೀಜ, ಗೊಬ್ಬರ ಮಾರಾಟದ ಕುರಿತು ಮೊದಲೇ ಮಾಹಿತಿ ನೀಡಬೇಕು. ರೈತರಿಗೆ ಅಗತ್ಯ ಸಲಹೆ, ಸಹಕಾರ ನೀಡುವ ಮೂಲಕ ನಷ್ಟ ತಪ್ಪಿಸಲು ಸಹಕರಿಸಬೇಕು. 2008ರಲ್ಲಿ ಗೊಬ್ಬರಕ್ಕಾಗಿ ಗೋಲಿಬಾರ್ ನಡೆದು ಇಬ್ಬರು ರೈತರು ಹುತಾತ್ಮರಾದರು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಗೊಬ್ಬರ ಸರಬರಾಜಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಲಿಂಕ್ ಇಲ್ಲದೇ ಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
— ಶಿವಾನಂದ ವಾರ್ತಿ, ಸ್ಥಳೀಯ ರೈತ
"
ಬೇಡಿಕೆಗೆ ತಕ್ಕಷ್ಟು ಬೀಜ, ಗೊಬ್ಬರದ ದಾಸ್ತಾನು ಇದೆ. ಲಿಂಕ್ ಖರೀದಿ ಕಡ್ಡಾಯವಲ್ಲ. ನಿಗದಿತ ದರಕ್ಕೆ ರೈತರಿಗೆ ಗೊಬ್ಬರ ಮಾತ್ರ ಮಾಡುವಂತೆ ವ್ಯಾಪಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಯಾರಾದರೂ ನಿಯಮ ಮೀರಿದ್ದು ಕಂಡುಬಂದರೆ ಅಂತಹ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
— ವೀರಭದ್ರಪ್ಪ ಬಿ.ಎಚ್., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹಾವೇರಿ