Haveri, Agadi, Bank Notice, Farmer, Suicide,  
ಹಾವೇರಿ

ಬ್ಯಾಂಕ್ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆ? ; ಹಾವೇರಿ ತಾಲೂಕು ತಿಮ್ಮೇನಹಳ್ಳಿಯಲ್ಲಿ ಬ್ಯಾಂಕ್ ಎದುರು ಶವ ಇಟ್ಟು ರೈತರ ಪ್ರತಿಭಟನೆ

ಹಾವೇರಿ: ಬ್ಯಾಂಕ್ ಒಂದರಲ್ಲಿ 6 ಲಕ್ಷ ಸಾಲ ಪಡೆದಿದ್ದ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ರೈತರೊಬ್ಬರು ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲದ ಬಾಕಿ ಹಣ ಪಾವತಿಸಲು ರಾಷ್ಟ್ರೀಕೃತ ಬ್ಯಾಂಕ್ ಒಂದು ನೋಟಿಸ್ ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪಿಸದ ಗ್ರಾಮಸ್ಥರು ಬುಧವಾರ ಅಗಡಿ ಗ್ರಾಮದಲ್ಲಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ತಿಮ್ಮೇನಹಳ್ಳಿ ಗ್ರಾಮದ ರೈತ ಸೋಮನಗೌಡ ನಿಂಗನಗೌಡ ಮುದಿಗೌಡ್ರ (47) ಆತ್ಮಹತ್ಯೆ ಮಾಡಿಕೊಂಡ ರೈತ.
ಸೋಮನಗೌಡ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ, ಮೆಣಸಿನಕಾಯಿ, ಇತರ ಬೆಳೆಗಳನ್ನು ಬೆಳೆಯುತ್ತಿದ್ದರು. 4 ವರ್ಷಗಳ ಹಿಂದೆ ಅಗಡಿ ಗ್ರಾಮದ ಬ್ಯಾಂಕ್‌ನಲ್ಲಿ 6 ಲಕ್ಷ ರೂ. ಬೆಳೆಸಾಲ ಪಡೆದಿದ್ದರು. ವ್ಯವಸಾಯಕ್ಕಾಗಿ ಹಣ ಬಳಸಿದ್ದರು. ಈವರೆಗೆ ಕಂತು ಪಾವತಿ ಮಾಡಿರಲಿಲ್ಲ. ಈವರೆಗೆ ಅದರ ಬಡ್ಡಿ ಸೇರಿ 8.94 ಲಕ್ಷ ರೂ. ಆಗಿತ್ತು. ಕಳೆದ 2 ವರ್ಷಗಳಲ್ಲಿ ಸುರಿದ ಭಾರೀ ಮಳೆಗೆ ಬೆಳೆ ಸರಿಯಾಗಿ ಬಾರದೇ ನಷ್ಟ ಅನುಭವಿಸಿದ್ದರು. ಈ ನಡುವೆ ಬ್ಯಾಂಕ್‌ನಿಂದ ನೋಟಿಸ್ ಬಂದಿತ್ತು. ಸಾಲ ಹೇಗೆ ತೀರಿಸುವುದು ಎಂದು ಮನನೊಂದು ಬುಧವಾರ ನಸುಕಿನ ಜಾವ ತನ್ನ ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗುತ್ತಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸಾಲ ಮನ್ನಾಕ್ಕೆ ಅನ್ನದಾತನ ಆಗ್ರಹ
ರೈತ ಸೋಮನಗೌಡ ಆತ್ಮಹತ್ಯೆ ಬೆನ್ನೆಲ್ಲೇ ತಾಲೂಕಿನ ಅಗಡಿ ಗ್ರಾಮದ ಬ್ಯಾಂಕ್ ಎದುರು ಅಗಡಿ, ತಿಮ್ಮೇನಹಳ್ಳಿ, ಬೂದಗಟ್ಟಿ ಗ್ರಾಮದ ರೈತರು ಶವ ಇಟ್ಟು ಪ್ರತಿಭಟನೆ ನಡೆಸಿದರು. ಗ್ರಾಮದ 20ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್‌ಗಳಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡದಂತೆ ಬ್ಯಾಂಕ್‌ಗಳಿಗೆ ಸರ್ಕಾರ ಸೂಚಿಸಿದ್ದರೂ ನೋಟಿಸ್ ನೀಡುತ್ತಿದ್ದಾರೆ. ಇದಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೊದಲೇ ಬರದಿಂದ ಬೆಂಡಾಗಿರುವ ರೈತರಿಗೆ ನೋಟಿಸ್ ನೀಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಸಾಲ ಮಾಡಿ ಬೆಳೆ ಬೆಳೆದರೂ ಬರದಿಂದ ಬೆಳೆಗಳು ಒಣಗಿ ಹೋಗಿವೆ. ಜೀವನವೇ ಕಷ್ಟಕರವಾಗಿದೆ.
ಆದ್ದರಿಂದ ಈ ಕೂಡಲೇ ಸರ್ಕಾರ ರೈತರಿಗೆ ಸಾಲ ಮರುಪಾವತಿಗೆ ನೋಟಿಸ್ ನೀಡಬಾರದು ಹಾಗೂ ಒತ್ತಡ ಹೇರಬಾರದು ಎಂದು ಆದೇಶ ಹೊರಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತರು ಆಗ್ರಹಿಸಿದರು. ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ಬ್ಯಾಂಕ್‌ನಿಂದ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಶವ ಸಂಸ್ಕಾರ ನೆರವೇರಿಸಿದರು.