jeeta paddati, nirmulana dina, 
ಹಾವೇರಿ

ಜೀತ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ; ಜೀತಪದ್ಧತಿ ನಿರ್ಮೂಲನಾ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಎಲ್. ಮನವಿ

ಹಾವೇರಿ: ದೇಶದ ಸ್ವಾತಂತ್ರ್ಯದ ಅಮೃತ ಕಾಲದಿಂದಲೂ ಮಾನವ ಕುಲಕ್ಕೆ ಕಳಂಕವಾಗಿರುವ ಈ ಜೀತ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜೀತಪದ್ದತಿ ನಿರ್ಮೂಲನಾ ದಿನಾಚರಣೆ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
1976ರ ಫೆಬ್ರವರಿ 9ರಂದು ಭಾರತ ಸರ್ಕಾರ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆ ಜಾರಿಗೆ ತರಲಾಗಿದೆ. ಈ ಐತಿಹಾಸಿಕ ಕಾಯ್ದೆ ಜಾರಿಗೆ ಬಂದ ನೆನಪಿಗಾಗಿ ಪ್ರತಿ ವರ್ಷ ಫೆ.9ರಂದು ಜೀತಪದ್ಧತಿ ನಿರ್ಮೂಲನಾ ದಿನ ಆಚರಿಸಲಾಗುತ್ತಿದೆ. ಈ ವರ್ಷ ಈ ಕಾಯ್ದೆ ಜಾರಿಯಾಗಿ 50 ವರ್ಷಗಳು ಪೂರೈಸುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು, ಮತ್ತು ಗ್ರಾಮ ಮಟ್ಟದಲ್ಲಿ ಜೀತ ಪದ್ಧತಿ ಕಂಡು ಬಂದಲ್ಲಿ ಅದನ್ನು ತಡೆಯಲು ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಡಾ.ಪುನೀತ ಬಿ.ಆರ್. ಮಾತನಾಡಿ, ಜೀತಪದ್ಧತಿ ಎಂಬುದು ದೈಹಿಕ ಶೋಷಣೆ ಜತೆಗೆ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಮಾಜವನ್ನು ಈ ಪಿಡುಗಿನಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಜೀತಪದ್ದತಿ ನಿರ್ಮೂಲನೆ ಮಾಡುವಲ್ಲಿ ಎಲ್ಲ ಇಲಾಖೆಯ ಜವಾಬ್ದಾರಿ ಮುಖ್ಯವಾಗಿರುತ್ತದೆ. ಮನುಷ್ಯನನ್ನು ವಸ್ತುವಿನಂತೆ ಮಾರಾಟ ಮಾಡುವ ಹಾಗೂ ಖರೀದಿಸುವುದೇ ಜೀತ ಪದ್ಧತಿಯಾಗಿದೆ. ಸಂವಿಧಾನದ 21ನೇ ವಿಧಿ ಜೀವಿಸುವ, ಸ್ವಾತಂತ್ರ್ಯದ ಹಕ್ಕು ಹಾಗೂ 23ನೇ ವಿಧಿ ಶೋಷಣೆ ವಿರುದ್ಧದ ಹಕ್ಕಿನ ಮೂಲಕ ದೇಶದ ಜನರಿಗೆ ಗೌರವಯುತ ಬದುಕನ್ನು ಕಲ್ಪಿಸಿದೆ. ಜೀತ ಕಾರ್ಮಿಕ ಪದ್ಧತಿ ಕಾಯ್ದೆ 1976 ಸೇರಿದಂತೆ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದೆ. ಜೀವನದ ಉನ್ನತಿಗೆ ಹಾಗೂ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ನಾವು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ತರುನ್ನುಮ್ ಬೆಂಗಾಲಿ ಮಾತನಾಡಿ, ಜೀತಪದ್ದತಿ ಮತ್ತು ಬಾಲ ಕಾರ್ಮಿಕ ಪದ್ದತಿಗೆ ಒಂದಕ್ಕೊಂದು ಸಂಬಂಧವಿದೆ. 14 ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡರೆ 20 ಸಾವಿರದಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇಟ್ಟಿಗೆ ಭಟ್ಟಿ, ಕೋಳಿ ಸಾಕಾಣಿಕೆ ಕೇಂದ್ರಗಳು, ರೇಷ್ಮೆ ನೂಲು ಬಿಚ್ಚುವ ಕೇಂದ್ರಗಳು, ಹೋಟೆಲ್‌ಗಳು, ತೋಟದ ಮನೆಗಳು, ಗಣಿಗಾರಿಕೆ ಪ್ರದೇಶಗಳು, ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವವರನ್ನು ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ಕಲೆ ಹಾಕಬೇಕು. ಅಂತಹ ಪ್ರದೇಶದಲ್ಲಿ ಜೀತಪದ್ಧತಿ ಆಚರಣೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಧಿಕಾರಿ ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಮುಖ್ಯ ಯೋಜನಾ ಕಾರ್ಯದರ್ಶಿ ಎಚ್.ವೈ.ಮೀಸೆ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ವಿವಿಧ ಜಾಗೃತಿ ಸಮಿತಿ ಸದಸ್ಯರು, ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಕೇಸ್
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಜೀತ ಪದ್ದತಿ ಪ್ರಕರಣಗಳು ದಾಖಲಾಗಿರುವುದಿಲ್ಲ. ಪೊಲೀಸ್ ಇಲಾಖೆ ಜೀತ ಪದ್ದತಿಯನ್ನು ಸಹಿಸುವುದಿಲ್ಲ. ಮಕ್ಕಳ ಶೋಷಣೆ, ಬಾಲ ಕಾರ್ಮಿಕ ಪದ್ದತಿ, ಹಲವಾರು ಅನಿಷ್ಟ ಪದ್ದತಿಗಳ ನಿರ್ಮೂಲನಗೆ ಯಾವುದೇ ಕ್ಷಣದಲ್ಲೂ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಯಾರಿದೆ. ಜೀತದಾಳುಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾಯ್ದೆಯಡಿ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಇಂತಹ ಅನಿಷ್ಟ ಪದ್ದತಿಗಳು ಕಂಡುಬಂದರೆ ಜೀತ ಕಾರ್ಮಿಕ ಸಹಾಯವಾಣಿ 155214 ಮತ್ತು ಮಕ್ಕಳ ಸಹಾಯವಾಣಿ 1098 ಸಂಪರ್ಕಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ಶಿರಕೋಳ ತಿಳಿಸಿದರು.