haveri-aadhar-UIDAI, Hand Writen, Birth Cirtificate, Problem,  
ಹಾವೇರಿ

ಆಧಾರ್ ತಿದ್ದುಪಡಿಗೆ ಮುಳ್ಳಾದ ಕೈಬರಹ ಜನನ ಪತ್ರ; ಹೆಸರು, ವಿಳಾಸ ಬದಲಿಸಲಾಗದೇ ವಿದ್ಯಾರ್ಥಿಗಳ ಸಂಕಷ್ಟ; ಸಮಸ್ಯೆ ಬಗೆಹರಿಸಲು ಯುಐಡಿಎಐಗೆ ಪಾಲಕರ ಆಗ್ರಹ

ಹಾವೇರಿ: ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯಶ್ಯವಾಗಿದೆ. ಶಾಲಾ ಮಕ್ಕಳಿಗಂತೂ ಇದು ಕ್ರಮವಾಗಿ ಇಲ್ಲದಿದ್ದರೆ ಅವರ ಭವಿಷ್ಯವೇ ಡೋಲಾಯಮಾನವಾಗುತ್ತದೆ. ಇಂತಹ ಮಹತ್ವದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಕೈಬರಹದ ಜನನ ಪ್ರಮಾಣ ಪತ್ರ ಮುಳ್ಳಾಗಿ ಪರಿಣಮಿಸಿದೆ.
ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ 2015ಕ್ಕಿಂತ ಮುಂಚೆ ಜನಿಸಿದ ಮಕ್ಕಳ ಜನನ ಪ್ರಮಾಣ ಪತ್ರಗಳು ಈವರೆಗೆ ಡಿಜಿಟಲೈಜೇಶನ್ ಆಗಿಲ್ಲ. ಕಾರಣ ಗ್ರಾಮೀಣ ಭಾಗದ ಹಲವೆಡೆ ಕೈಬರದ ಪ್ರಮಾಣ ಪತ್ರವನ್ನೇ ನೀಡಲಾಗುತ್ತಿದೆ. 2015ಕ್ಕೂ ಮೊದಲು ಜನಿಸಿ ಮಕ್ಕಳ ಹೆಸರು, ವಿಳಾಸ, ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿದರೆ ತಿರಸ್ಕರಿಸಲಾಗುತ್ತಿದೆ. ಹತ್ತಾರು ಬಾರಿ ಅರ್ಜಿ ಸಲ್ಲಿಸಿದರೂ ರಿಜೆಕ್ಟ್ ಆಗುತ್ತಿವೆ. ತಿಂಗಳಿಗೆ ಒಬ್ಬ ಆಪರೇಟರ್ ಸಲ್ಲಿಸಿದ ಒಟ್ಟು ಅರ್ಜಿಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ತಿರಸ್ಕಾರವಾದರೆ ಅವರಿಗೆ ದಂಡ ವಿಧಿಸಲಾಗುತ್ತದೆ.
ಹಾಗಾಗಿ, ಇಂತಹ ಕೇಸ್‌ಗಳನ್ನು ಮುಂದಕ್ಕೆ ತಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನಿಸಿದ ಮಕ್ಕಳ ಹೆಸರು ತಿದ್ದುಪಡಿಗಾಗಿ ಪಾಲಕರು, ಮಕ್ಕಳು ಆಧಾರ್ ಕೇಂದ್ರಗಳಿಗೆ ನಿತ್ಯವೂ ಅಲೆಯುವಂತಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಅಂಚೆ ಕಚೇರಿ, ಬ್ಯಾಂಕುಗಳು ಅಲೆದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಆಧಾರ್ ಆಪರೇಟರ್‌ಗಳು ಡಿಜಿಟಲ್ ಜನನ ಪ್ರಮಾಣ ಪತ್ರ ತನ್ನಿ ಎನ್ನುತ್ತಾರೆ. ಬೆಂಗಳೂರು ಖನಿಜ ಭವನಕ್ಕೆ ಹೋಗಿ, ದಾವಣೆಗೆರೆ, ಹುಬ್ಬಳ್ಳಿಯ ಆಧಾರ್ ಕೇಂದ್ರಕ್ಕೆ ಹೋಗಿ ಎಂದು ಅಲೆದಾಡಿಸುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಮಕ್ಕಳ ಪಾಲಕರು ಆಧಾರ್ ತಿದ್ದುಪಡಿ ಮಾಡಿಸುವುದು ಹೇಗೆ ಮತ್ತು ಎಲ್ಲಿ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಯುಐಡಿಎಐ (ಯುನಿಕ್ ಐಡೆಂಟಿಫೇಕಶನ್ ಅಥಾರಿಟಿ ಆಫ್ ಇಂಡಿಯಾ) ಜತೆ ಸಮಾಲೋಚನೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕಿದೆ. ಬಾಕ್ಸ್ ನೋಂದಣಾಧಿಕಾರಿಗಳ ಪತ್ರಕ್ಕಿಲ್ಲ ಕಿಮ್ಮತ್ತು ?
ರಾಜ್ಯದಲ್ಲಿ ಜನನ, ಮರಣ ನೋಂದಣಿಗೆ ಇ-ಜನ್ಮ ತಂತ್ರಾಂಶವನ್ನು ಏಪ್ರಿಲ್ 1, 2015ರಿಂದ ಹಂತ ಹಂತವಾಗಿ ಜಾರಿಗೊಳಿಸಲಾಗಿದೆ. ಇದಕ್ಕೂ ಮೊದಲು ಗ್ರಾಮೀಣ ಪ್ರದೇಶದಲಿ ಕೈಬರಹದಲ್ಲೇ ನೀಡಲಾಗುತ್ತಿತ್ತು. ಸರ್ಕಾರದ ನಿರ್ದೇಶನದ ಮೇರೆಗೆ ಆಯ್ಕೆಯಾದ ಜಿಲ್ಲೆಗಳಲ್ಲಿ ಮಾತ್ರ ಕೈಬರಹದ ಪ್ರಮಾಣ ಪತ್ರಗಳನ್ನು ಹಂತ ಹಂತವಾಗಿ ಡಿಜಿಟಲೈಸೇಶನ್ ಮಾಡಲು ಕ್ರಮ ವಹಿಸಲಾಗಿದೆ. ಬಾಕಿ ಇರುವ ಜಿಲ್ಲೆಗಳಲ್ಲಿ ಡಿಜಿಟಲೈಸೇಶನ್ ಆಗಿಲ್ಲ, ಹಾಗಾಗಿ, ಆಧಾರ್ ಪ್ರಕ್ರಿಯೆಗಳಿಗೆ ಕೈಬರಹದ ದೃಢೀಕೃತ ಜನನ ಪ್ರಮಾಣ ಪತ್ರವನ್ನು ಪರಿಗಣಿಸುವಂತೆ ರಾಜ್ಯ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಯವರು ಬೆಂಗಳೂರಿನ ಯುಐಡಿಎಐ ಪ್ರಾಂತೀಯ ಕಚೇರಿ ಉಪ ಮಹಾನಿರ್ದೇಶಕರಿಗೆ ಸೆಪ್ಟೆಂಬರ್ 30, 2024ರಲ್ಲೇ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಈ ಕುರಿತು ಆದೇಶ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ವರ್ ಸಮಸ್ಯೆ
ಆಧಾರ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದ ದಿನಗಟ್ಟಲೆ ಜನ ಸರತಿಯಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಗಿದೆ. ಬುಧವಾರ ಹಾವೇರಿ, ರಾಣೆಬೆನ್ನೂರ, ಧಾರವಾಡ ಜಿಲ್ಲೆ ಸೇರಿ ಹಲವು ಕೇಂದ್ರಗಳಲ್ಲಿ ಗಂಟೆಗಳ ಕಾಲ ಸರ್ವರ್ ಬಿಸಿ ಇತ್ತು.
"

ನನ್ನ ಮಗ 2012ರಲ್ಲಿ ಅಕ್ಕಿಆಲೂರಿನಲ್ಲಿ ಜನಿಸಿದ್ದ. ಗ್ರಾಮ ಪಂಚಾಯಿತಿಗೆ ಕೇಳಿದರೆ ಇನ್ನೂ ಡಿಜಿಟಲ್ ಆಗಿಲ್ಲ ಎಂದು ಕೈಬರಹದ ಜನನ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆಧಾರ್ ಕೇಂದ್ರದಲ್ಲಿ ಹಲವು ಬಾರಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ರಿಜೆಕ್ಟ್ ಆಗುತ್ತಿದೆ. ಈ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಗುತ್ತಿಲ್ಲ.

— ರೇಣುಕಾ ಆರ್.ಬಿ., ಪಾಲಕರು

"

ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಈಗಾಗಲೇ 2015ಕ್ಕಿಂತ ಮುಂಚಿನ ಕೈಬರಹ ಜನನ ಪ್ರಮಾಣ ಪತ್ರಗಳನ್ನು ಸ್ವೀಕರಿಸಿ ತಿದ್ದುಪಡಿ ಮಾಡುವಂತೆ ಯುಐಡಿಎಐಗೆ ಪತ್ರ ಬರೆದಿದ್ದಾರೆ. ಆದರೂ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಮತ್ತೊಮ್ಮೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

— ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ, ಹಾವೇರಿ