ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅನಿತಾ ಶಿವೂರ, ಮಮತಾ ಆರೆಗೊಪ್ಪ, ರಾಧಿಕಾ ದೇಶಪಾಂಡೆ, ಶಂಶಿಯಾಬಾನು ಬಾಳೂರ, ಗೀತಾ ಪೂಜಾರ, ಪಕ್ಷದ ವಿವಿಧ ಮಹಿಳಾ ಘಟಕಗಳ ಪದಾಧಿಕಾರಿಗಳಿದ್ದರು.
- ಶಾಸಕ ಶ್ರೀನಿವಾಸ ಮಾನೆ ಹೇಳಿಕೆ
- ಮಹಿಳಾ ಮೀಸಲಾತಿ ಹೆಸರಿನಲ್ಲಿ ಅನುಕಂಪ ಪಡೆಯುವ ಯತ್ನ
ಹಾನಗಲ್ಲ: ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಹಿಳೆಯರ ಅನುಕಂಪ ಪಡೆಯುವ ಎನ್‌ಡಿಎ ಸರ್ಕಾರದ ರಾಜಕೀಯ ಹುನ್ನಾರ ಈಗ ಬಯಲಾದಂತಾಗಿದೆ. ಬಿಲ್ ಬಿದ್ದು ಹೋದರೆ ಬಿಜೆಪಿಗೆ ಬಹು ದೊಡ್ಡ ಲಾಭ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇದನ್ನು ಒಪ್ಪಿಕೊಂಡಂತಾಗಿದೆ. ದೇಶದ ಅಭಿವೃದ್ಧಿ ವಿಷಯದಲ್ಲಿ ಇಂತಹ ರಾಜಕೀಯ ಒಳ್ಳೆಯ ಬೆಳವಣಿಗೆಯಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವಗಾಂಧಿ, ಮನಮೋಹನ ಸಿಂಗ್, ಪಿ.ಎನ್. ನರಸಿಂಹರಾವ್ ಅವರು ಪ್ರಧಾನಮಂತ್ರಿಗಳಾಗಿದ್ದಾಗಲೇ ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ಮುಂದಾಗಿತ್ತು. ಆದರೆ, ಬಜೆಪಿ ಇದಕ್ಕೆ ಸಹಕಾರ ನೀಡಿರಲಿಲ್ಲ. ಈಗ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಮಹಿಳೆಯರ ಅನುಕಂಪ ಪಡೆಯಲು ಮುಂದಾಗಿರುವ ಸಂಗತಿ ಇಡೀ ದೇಶಕ್ಕೆ ಗೊತ್ತಾಗಿದೆ ಎಂದರು.
2010ರಲ್ಲಿ ಯುಪಿಎ ಸರ್ಕಾರ ಇದ್ದಾಗಲೇ ಸ್ಥಳೀಯ ಸಂಸ್ಥೆಗಳಿಗೆ ಶೇ. 33ರ ಮೀಸಲಾತಿ ನೀಡಿದೆ. ಇದರಿಂದ ಇಡೀ ದೇಶದಲ್ಲಿ ಮಹಿಳೆಯರಿಗೆ ಒಳ್ಳೆಯ ಅವಕಾಶ ನೀಡಿದೆ. ಹೀಗಾಗಿ, ಹಾನಗಲ್ಲ ತಾಲೂಕಿನ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ 300ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳಿದ್ದಾರೆ ಎಂದರು.
ಎನ್‌ಡಿಎ ಸರ್ಕಾರ 2024ರಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟೆಬಿಟ್ಟೆವು ಎನ್ನುವಂತೆ ಮಾಡಿದರು. ಆದರೆ, ಈವರೆಗೂ ಅದರ ಸುದ್ದಿಯೇ ಇರಲಿಲ್ಲ. ಈಗ ಮೀಸಲಾತಿ ಮುನ್ನೆಲೆಗೆ ತಂದು ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿ ಸ್ಥಾನದ ಗೌರವ ಕುಗ್ಗಿಸಿದೆ. ಮಹಿಳಾ ಮೀಸಲಾತಿಗೆ ಎನ್‌ಡಿಎ ಸರ್ಕಾರಕ್ಕೆ ಕಾಳಜಿ ಇದ್ದರೆ ಈಗಿರುವ ಜನಂಖ್ಯೆಯ ಆಧಾರದ ಮೇಲೆಯೇ ಮೀಸಲಾತಿ ಪ್ರಕಟಿಸಲಿ. ಮತ್ತೆ ಈಗ ನಡೆದಿರುವ ಜನಗಣತಿ ಆಧರಿಸಿ ಜನಸಂಖ್ಯೆ ಪರಿಗಣಿಸಿ ಮೀಸಲಾತಿಗೆ ಕಾಯುವುದೇಕೆ? ಎಂದು ಮಾನೆ ಪ್ರಶ್ನಿಸಿದರು.
ದಕ್ಷಿಣ ಭಾರತ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಆಸಕ್ತಿಯಿಂದ ಮುನ್ನಡೆದ ಪರಿಣಾಮ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಉತ್ತರದ ರಾಜ್ಯಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ. ಈಗ ಇದೇ ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಪ್ರಕಟಿಸುವ ಬದಲು ಈಗಿರುವ ಲೋಕಸಭೆ ಸ್ಥಾನಗಳನ್ನೇ ಆಧಾರವಾಗಿಟ್ಟುಕೊಂಡು ಮಹಿಳಾ ಮೀಸಲಾತಿ ಘೋಷಿಸಲಿ. ಇದರಿಂದ ದಕ್ಷಿಣ ರಾಜ್ಯಗಳಿಗೆ ಅನುಕೂಲ ಆಗುತ್ತದೆ. ಇಲ್ಲದಿದ್ದರೆ ದಕ್ಷಿಣ ರಾಜ್ಯಗಳು ಹಲವು ರೀತಿಯ ತಾರತಮ್ಯಕ್ಕೆ ಈಡಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಪುರಸಭೆ ಮಾಜಿ ಅಧ್ಯಕ್ಷರಾದ ಮಮತಾ ಆರೆಗೊಪ್ಪ, ರಾಧಿಕಾ ದೇಶಪಾಂಡೆ, ಸದಸ್ಯೆ ಶಂಶಿಯಾಬಾನು ಬಾಳೂರ, ಹಾಗೂ ಗೀತಾ ಪೂಜಾರ, ಪಕ್ಷದ ವಿವಿಧ ಮಹಿಳಾ ಘಟಕಗಳ ಪದಾಧಿಕಾರಿಗಳು, ಮಹಿಳಾ ಜನಪ್ರತಿನಿಧಿಗಳು ಇದ್ದರು.