ಭತ್ತ ಬಿತ್ತನೆ (paddy sowing) ಕಾರ್ಯದಲ್ಲಿ ತೊಡಗಿರುವ ರೈತರು. 
ಹಾವೇರಿ

Paddy sowing ಭತ್ತದತ್ತ ಹೊರಳುತ್ತಿರುವ ಹಾನಗಲ್ಲ ರೈತರು

ಹಾನಗಲ್ಲ: ಭತ್ತದ ಕಣಜವಾಗಿದ್ದ ಹಾನಗಲ್ಲ ತಾಲೂಕನ್ನು ಕಳೆದ ಒಂದೂವರೆ ದಶಕದಿಂದ ಗೋವಿನಜೋಳ ಆವರಿಸಿತ್ತು. ಇದೀಗ ಮತ್ತೆ ಭತ್ತ ಬಿತ್ತನೆಗೆ (paddy sowing)ರೈತರು ಆಸಕ್ತಿ ತೋರುತ್ತಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 46 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತೆನಯಾಗುತ್ತದೆ. ಮಳೆ ವ್ಯತ್ಯಾಸ, ಬೆಳೆಯುವ ಖರ್ಚು ಹೆಚ್ಚಳ, ಕೂಲಿಕಾರರ ಹಾಗೂ ಆದಾಯ ಕೊರತೆಯಿಂದಾಗಿ ಭತ್ತದ ಬೆಳೆಯಿಂದ ರೈತರು ದೂರಾಗಿದ್ದರು. ಇದಕ್ಕೆ ಪರ್ಯಾಯವಾಗಿ ಕಡಿಮೆ ಖರ್ಚಿನ ಗೋವಿನಜೋಳದತ್ತ ಮುಖ ಮಾಡಿದ್ದರು. ಹೀಗಾಗಿ, ಭತ್ತದ ಕಣಜವೆಂಬ ಹಣೆಪಟ್ಟಿ ಕಳಚಿತ್ತು.
ಒಂದೂವರೆ ದಶಕದಿಂದ ಪ್ರಮುಖ ಬೆಳೆಯಾಗಿದ್ದ ಗೋವಿನಜೋಳ ಈ ವರ್ಷ ಆಕರ್ಷಣೆ ಕಳೆದುಕೊಂಡಿದೆ. ಕೆಲವರ್ಷಗಳಿಂದ ಗೋವಿನಜೋಳ ಬೆಳೆಗೆ ಮುಳ್ಳು ಸಜ್ಜೆ ಕಳೆ ಕಂಟಕವಾಗಿ ಕಾಡುತ್ತಿದೆ. ಸಣ್ಣದಾಗಿ ಇದ್ದ ಮುಳ್ಳುಸಜ್ಜೆ ಬರಬರುತ್ತ ರೈತರ ಹೊಲಗಳನ್ನೆಲ್ಲ ವ್ಯಾಪಿಸಿಕೊಂಡಿತು. ಇದರ ಹಾವಳಿಗೆ ಗೋವಿನಜೋಳ ಬೆಳೆ ಕುಂಠಿತವಾಗತೊಡಗಿತು. ಮುಳ್ಳು ಸಜ್ಜೆಯು ಯಾವುದೇ ಕಳೆನಾಶಕಕ್ಕೂ ನಾಶವಾಗುತ್ತಿಲ್ಲ. ಫಸಲು ಕೈಗೆ ಸಿಗದಂತಹ ಸ್ಥಿತಿ ಉಂಟಾಗುತ್ತಿರುವುದರಿಂದ ರೈತರು ಗೋವಿನಜೋಳದಿಂದ ದೂರ ಸರಿಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ವರ್ಷ 306 ಕ್ವಿಂಟಾಲ್ ಗೋವಿನಜೋಳ ವಿತರಣೆಯಾಗಿತ್ತು. ಈ ಬಾರಿ 350 ಕ್ವಿಂಟಾಲ್ ಬೇಡಿಕೆ ಇತ್ತು. ಆದರೆ, ಈವರೆಗೂ ಕೇವಲ 111 ಕ್ವಿಂಟಾಲ್ ಮಾತ್ರ ಮಾರಾಟವಾಗಿದೆ. ಅಲ್ಲದೆ, ಬೇಡಿಕೆಯೂ ಅಷ್ಟರಮಟ್ಟಿಗೆ ಇಲ್ಲ. ಗೋವಿನಜೋಳದ ಇಳುವರಿ ಕುಸಿತ ಹಾಗೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಿರುವುದು ಕೂಡ ಕಾರಣವಾಗಿದೆ.
ಗೋವಿನಜೋಳಕ್ಕೆ ಬದಲಿಗೆ ರೈತರು ಸೋಯಾಬೀನ್, ಭತ್ತ ಬೆಳೆಯಲು ಮುಂದಾಗುತ್ತಿದ್ದಾರೆ. ಹೀಗಾಗಿ, ಈ ವರ್ಷ ಸೋಯಾಬೀನ್ ಹಾಗೂ ಭತ್ತದ ಬಿತ್ತನೆ ಬೀಜಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆದರೆ, ಬೇಡಿಕೆ ತಕ್ಕಂತೆ ರೈತರಿಗೆ ಸೋಯಾಬೀನ್ ಬೀಜ ಸಿಗುತ್ತಿಲ್ಲ. ಕೃಷಿ ಇಲಾಖೆಯು ಈಗಾಗಲೇ ಬೇಡಿಕೆಯಂತೆ ದಾಸ್ತಾನು ಮಾಡಿದ 1100 ಕ್ವಿಂಟಾಲ್ ಸೋಯಾಬೀನ್ ಬೀಜವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಿದೆ. ಇನ್ನೂ 500 ಕ್ವಿಂಟಾಲ್ ಸೋಯಾಬೀನ್ ಬೀಜಕ್ಕೆ ಬೇಡಿಕೆ ಇದೆಯಾದರೂ, ಎಲ್ಲಿಯೂ ದಾಸ್ತಾನು ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ವರ್ಷ 856 ಕ್ವಿಂಟಾಲ್ ಸೋಯಾಬೀನ್ ಮಾರಾಟವಾಗಿತ್ತು. ಈ ಬಾರಿ ಈಗಾಗಲೇ 1100 ಕ್ವಿಂಟಾಲ್ ಮಾರಾಟವಾಗಿದೆ.
ಭತ್ತದ ನಾಡೆಂದು ಹೆಸರಾದ ಹಾನಗಲ್ಲ ತಾಲೂಕಿನಲ್ಲಿ ಗೋವಿನಜೋಳ ಆವರಿಸಿ ಭತ್ತ ಬಿತ್ತನೆ ತೀರ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಭತ್ತ ಬಿತ್ತನೆ, ಅದರಲ್ಲೂ ದೊಡ್ಡ ಭತ್ತ ಬಿತ್ತನೆಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಬಿತ್ತೆನ ಹಾಗೂ ನಾಟಿಗಾಗಿ 2663 ಕ್ವಿಂಟಾಲ್ ಮಾರಾಟವಾಗಿತ್ತು. ಸದ್ಯ 325 ಕ್ವಿಂಟಾಲ್ ಮಾರಾಟವಾಗಿದೆ. 834 ಕ್ವಿಂಟಾಲ್ ದಾಸ್ತಾನಿದೆ. ಉಳಿದಂತೆ ಶೇಂಗಾ, ಹತ್ತಿ, ದ್ವಿದಳ ಧಾನ್ಯಗಳ ಬಿತ್ತನೆ, ಬೀಜಗಳ ಬೇಡಿಕೆ- ವಿತರಣೆ ಯಥಾಸ್ಥಿತಿಯಲ್ಲಿದೆ.