ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ಯಾರಂಟಿ (ಪಂಚ ಗ್ಯಾರಂಟಿ (guarantees) ಫಲಾನುಭವಿಗಳ ಸ್ಪಂದನಾ ಸಮಾವೇಶವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು. ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಎಸ್.ಆರ್. ಪಾಟೀಲ, ಎಂ.ಎಂ. ಹಿರೇಮಠ, ವಿಜಯಕುಮಾರ ದೊಡ್ಡಮನಿ, ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಮಂಜು ಗೊರಣ್ಣನವರ, ಹನುಮಂತಪ್ಪ ಮರಗಡಿ ಇದ್ದರು. 
ಹಾವೇರಿ

guarantees ಗ್ಯಾರಂಟಿಗಳಿಂದ ಜನರ ಜೀವನ ಮಟ್ಟ ಸುಧಾರಣೆ

ಹಾನಗಲ್ಲ: ಪಂಚ ಗ್ಯಾರಂಟಿ (guarantees) ಯೋಜನೆಗಳಿಂದ ತಾಲೂಕಿಗೆ ಕಳೆದ 2 ವರ್ಷಗಳಲ್ಲಿ 500 ಕೋಟಿ ರೂ. ಆರ್ಥಿಕ ನೆರವು ಸಿಕ್ಕಿದೆ. ಇದರಿಂದ ಮಹಿಳೆಯರ ಖರೀದಿ ಶಕ್ತಿ ಹೆಚ್ಚಿ, ವ್ಯಾಪಾರಕ್ಕೆ ಜೀವ ತುಂಬಿದೆ. ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಸುಧಾರಣೆ ಕಂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ 60 ಸಾವಿರಕ್ಕೂ ಅಧಿಕ ಕುಟುಂಬಗಳು ವಾರ್ಷಿಕ 50ರಿಂದ 60 ಸಾವಿರ ರೂ. ಆರ್ಥಿಕ ನೆರವು ಪಡೆಯುತ್ತಿವೆ. ಗ್ಯಾರಂಟಿ ಯೋಜನೆಗಳು ಬಡವರು, ಮಧ್ಯಮ ವರ್ಗದ ಕುಟುಂಬಗಳ ಬದುಕು ಬದಲಿಸಿವೆ. ಈ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ಗ್ಯಾರಂಟಿ ಯೋಜನೆಗಳ ಕಾರಣ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹೊಸ ಭರವಸೆಗಳೊಂದಿಗೆ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಇದನ್ನು ಸಹಿಸದ, ಜೀರ್ಣಿಸಿಕೊಳ್ಳದ ಪಟ್ಟಭದ್ರ ಹಿತಾಸಕ್ತಿಗಳು ಟೀಕೆ ಮಾಡುತ್ತಿದ್ದಾರೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಅವರು ಭೂ-ಗ್ಯಾರಂಟಿ ಯೋಜನೆಯಲ್ಲಿ ಸರ್ಕಾರದ ದೊಡ್ಡಸ್ತಿಕೆ ಇಲ್ಲ ಎನ್ನುತ್ತಿದ್ದಾರೆ. ಕಳೆದ 40-50 ವರ್ಷಗಳಿಂದ ಸಾವಿರಾರು ಕುಟುಂಬಗಳು ಮನೆ ಮಾಲಿಕತ್ವ ಇಲ್ಲದೇ ಪರದಾಡುತ್ತಿದ್ದರು. ಇದೀಗ ಹಕ್ಕುಪತ್ರ ನೀಡಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದರು.
ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಮಂಜು ಗೊರಣ್ಣನವರ, ಹನುಮಂತಪ್ಪ ಮರಗಡಿ, ಭರಮಣ್ಣ ಶಿವೂರ, ಶಿವು ಭದ್ರಾವತಿ, ತಾಪಂ ಇಓ ಪರಶುರಾಮ ಪೂಜಾರ, ಸಿಡಿಪಿಒ ರಾಮು ಬೈಲಸೀಮೆ ಸೇರಿದಂತೆ ಗ್ರಾಪಂ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.