ರಾಣೆಬೆನ್ನೂರ: ಕಾಲೇಜು ಶುಲ್ಕ್ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷಾ ಪ್ರವೇಶ ಪತ್ರ ನೀಡದೆ ಸತಾಯಿಸಿದ ಸರ್ಕಾರಿ ಶಾಲಾ ಸಹ ಶಿಕ್ಷಕಿಯನ್ನು ಡಿಡಿಪಿಐ ಆದೇಶದ ಮೇರೆಗೆ ಬಿಇಒ ಶ್ಯಾಮಸುಂದರ ಅಡಿಗ ಅಮಾನತು ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ನಗರದ ಸರ್ಕಾರಿ ಶಾಲೆ ನಂ.7 ಶಿಕ್ಷಕಿ ಸುನೀತಾ ಡಿ.ಬಿ. ಅಮಾನತುಗೊಂಡಿರುವ ಶಿಕ್ಷಕಿ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದರೂ ಸುನೀತಾ ಬಿ. ಸ್ಥಳೀಯ ಬಿಎಜೆಎಸ್ಎಸ್ ಪಿಯು ವಿಜ್ಞಾನ ಖಾಸಗಿ ಕಾಲೇಜ್ ನಲ್ಲಿ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಎಂಬುವಳು ವ್ಯಾಸಂಗದ 30 ಸಾವಿರ ರೂ. ಫೀಸ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಪ್ರವೇಶ ಪತ್ರವನ್ನು ನೀಡದೆ ಸತಾಯಿಸಿದ್ದರು.
ಇದರಿಂದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಸೇರಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಶಿಕ್ಷಕಿ ಸುನೀತಾ ವಿದ್ಯಾರ್ಥಿನಿ ಪಾಲಕರ ಬೈಕ್ ಕೀ ಅಡವಿಟ್ಟುಕೊಂಡು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು.
ಈ ಎಲ್ಲ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿತ್ತು. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.