ಹಾವೇರಿ: ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ಕೊಟ್ಟು ಮಹಾರಾಷ್ಟ್ರದ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂ. ವಂಚಿಸಿರುವ ಘಟನೆ ಇಲ್ಲಿಗೆ ಸಮೀಪದ ಬಂಕಾಪುರ ಟೋಲ್ನಾಕಾ ಬಳಿ ನಡೆದಿದೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಾಬಲೇಶ್ವರ ತಾಲೂಕಿನ ಕಿಂಗರ್ ಗ್ರಾಮದ ಶಂಕರ ಹರಿಬಾಹು ಅದಾನಿ (50) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಫೋನ್ ಮಾಡಿದ ಯಾರೋ ಅಪರಿಚಿತರು ನಮ್ಮ ಮನೆ ಪಾಯ ತೆಗೆಯುವಾಗ 4 ಕೆ.ಜಿ. ಚಿನ್ನದ ಬಿಲ್ಲೆ ಸಿಕ್ಕಿವೆ. ನಮಗೆ ದುಡ್ಡಿನ ಅವಶ್ಯಕತೆಯಿದ್ದು ಅವುಗಳಲ್ಲಿ 250 ಗ್ರಾಂಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಶಂಕರ 5 ಲಕ್ಷ ರೂ. ತೆಗೆದುಕೊಂಡು ಬಂದಿದ್ದಾನೆ. ಅಪರಿಚಿತರು ಆತನಿಗೆ ಮೊದಲು 2 ಅಸಲಿ ಬಿಲ್ಲೆಗಳನ್ನು ಕೊಟ್ಟು ನಂಬಿಸಿದ್ದಾರೆ. ನಂತರ ಆತ ಹಣ ಕೊಡುತ್ತಿದ್ದಂತೆ 250 ಗ್ರಾಂ ನಕಲಿ ಬಿಲ್ಲೆ ಕೊಟ್ಟು ಪರಾರಿಯಾಗಿದ್ದಾರೆ. ಶಂಕರ ಅವರು ಹೋದ ಬಳಿಕ ನೋಡಿದಾಗ ನಕಲಿ ಚಿನ್ನ ಎಂಬುದು ತಿಳಿದಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.