ಶಿಗ್ಗಾಂವಿ ಪಟ್ಟಣದ ಮೌಲಾಲಿ ನಗರದ ರಸ್ತೆಗಳಲ್ಲಿ ಸಮರ್ಪಕವಾಗಿ ಚರಂಡಿಗಳಿಲ್ಲದೆ ತ್ಯಾಜ್ಯ, ಕೊಳಚೆ ಸಂಗ್ರಹಗೊಂಡಿರುವು.
ಶಿಗ್ಗಾಂವಿ: ಪಟ್ಟಣದಲ್ಲಿ ನಿತ್ಯ ರಸ್ತೆ ಬದಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ದುರ್ನಾತ ಬೀರುತ್ತ ರೋಗಗಳ ಭೀತಿ ಸೃಷ್ಟಿಸಿದೆ.
ಹಳೆಪೇಟೆಯ ಬೆಣ್ಣೆಕಟ್ಟೆ ಬಳಿ, ಅಂಬೇಡ್ಕರ್ ನಗರದಿಂದ ಕಂಕನವಾಡ ಸಂಪರ್ಕಿಸುವ ರಸ್ತೆ ಉದ್ದಕ್ಕೂ ಹಾಗೂ ರಾಚನಕಟ್ಟಿ ಕೆರೆಯ ಸುತ್ತಲಿನ ರಸ್ತೆಗಳ ಬದಿಯಲ್ಲಿ ಪ್ರತಿದಿನವೂ ರಾಶಿ ರಾಶಿ ಕಸ ಸಂಗ್ರಹಗೊಳ್ಳುತ್ತಿದೆ. ಆದರೆ, ಸಂಬಂಧಿಸಿದ ಪುರಸಭೆಯವರು ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿ ಮಾಡದೆ ಇರುವ ಕಾರಣಕ್ಕೆ ಸ್ಥಳೀಯರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಪಟ್ಟಣದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕೆ ಹೊಸ ಬಸ್ ನಿಲ್ದಾಣದಿಂದ ಹೆದ್ದಾರಿಯ ಸರ್ವಿಸ್ ರಸ್ತೆ, ಪ್ರವಾಸಿ ಮಂದಿರ ಮಾರ್ಗದಿಂದ ಮೊಲಾಲಿ ನಗರ ಸೇರಿದಂತೆ ಇತರ ಕಡೆಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹೀಗಾಗಿ ರಸ್ತೆಗಳೆಲ್ಲ ಕೊಳಚೆಮಯವಾಗಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.
ಮೌಲಾಲಿ ನಗರದ ಜನತೆ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಕಳೆದ ಏಳೆಂಟು ತಿಂಗಳಿನಿಂದ ಚರಂಡಿ ವ್ಯವಸ್ಥೆ ಕಲ್ಪಿಸಿ ಪಟ್ಟಣದ ಕೊಳಚೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಸಲೀಂ ಬೇವಿನಹಳ್ಳಿ, ಗದಿಗೆಪ್ಪ ಹುಯಿಲಗೋಳ, ಮಕ್ಬೂಲ್ ಕತೀಬ, ಇರ್ಷಾದ್ ಮುಲ್ಲಾ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಕೊಳಚೆ ನೀರು ಹರಿಯುವ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಮತ್ತು ಶಾಶ್ವತ ಚರಂಡಿ ವ್ಯವಸ್ಥೆ ನಿರ್ಮಿಸಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.
ಸ್ಥಳೀಯ ಪುರಸಭೆ ಬಜೆಟ್‌ನಲ್ಲಿ ಕಸ ವಿಲೇವಾರಿ, ಚರಂಡಿಗಳ ನಿರ್ಮಾಣಕ್ಕೆ ಕೋಟಿ ಕೋಟಿ ಅನುದಾನದ ಖರ್ಚು ತೋರಿಸುವ ಅಧಿಕಾರಿಗಳು, ಸ್ಥಳೀಯವಾಗಿ ಉದ್ಭವಿಸುವ ಚರಂಡಿಯ ಕೊಳಚೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಮೌಲಾಲಿ ನಗರದ ಜನತೆ ಎದುರಿಸುತ್ತಿರುವ ದುರ್ನಾಥ ಸಮಸ್ಯೆಯನ್ನು ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಸ್ಥಳೀಯರ ಆರೋಗ್ಯದ ಹಿತ ದೃಷ್ಟಿಯಿಂದ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಸಮರ್ಪಕವಾಗಿ ಚರಂಡಿಗಳನ್ನು ನಿರ್ಮಿಸಬೇಕು.