ಸವಣೂರು: ರಾಜಬೀದಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ, ಸುಮಾರು 500 ಮೀಟರ್‌ವರೆಗೆ ಮೆರವಣಿಗೆ ನಡೆಸಿದ್ದ ಗಣೇಶ ಮೂರ್ತಿಯನ್ನು ಸಮಿತಿ ಸದಸ್ಯರು ವಾಪಸ್ ತೆಗೆದುಕೊಂಡು ದೇವಸ್ಥಾನದಲ್ಲೇ ಪುನಃ ಪ್ರತಿಷ್ಠಾಪಿಸಿದ ಘಟನೆ ಪಟ್ಟಣದ ಸಿಂಪಿಗೆ ಗಲ್ಲಿಯಲ್ಲಿ ನಡೆದಿದೆ.
ಸಿಂಪಿಗೆ ಗಲ್ಲಿಯ ಗಣೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ಗಣೇಶೋತ್ಸವ ಸಮಿತಿ ವತಿಯಿಂದ ವಿವಿಧ ಸಾಂಪ್ರದಾಯಿಕ ಕಲಾತಂಡಗಳೊಂದಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯ ಮಾರ್ಗ ಹಾಗೂ ದಿನಾಂಕ ನಿಗದಿ ಸಂಬಂಧ ಪಟ್ಟಣದ ಎಲ್ಲ ಗಣೇಶೋತ್ಸವ ಸಮಿತಿಗಳ ಸದಸ್ಯರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.
ಮೆರವಣಿಗೆ ರಾಜಬೀದಿಗೆ ಪ್ರವೇಶಿಸುವ ಸಂದರ್ಭದಲ್ಲಿ ಪೊಲೀಸರು ತಡೆದರು. ರಾಜಬೀದಿಯಲ್ಲಿ ಮಸೀದಿ ಇರುವ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರು ಎನ್ನಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಸದಸ್ಯರು, ಹಲವು ವರ್ಷಗಳಿಂದ ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಗಣೇಶೋತ್ಸವ ಆಚರಿಸುತ್ತಿದ್ದು, ಈ ಬಾರಿ ರಾಜಬೀದಿಯಲ್ಲಿ ಮೆರವಣಿಗೆಗೆ ನಿರ್ಬಂಧ ವಿಧಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಈ ಕುರಿತು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರೂ ಒಮ್ಮತಕ್ಕೆ ಬರಲಾಗಲಿಲ್ಲ. ರಾಜಬೀದಿಯಲ್ಲಿ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಸಮಿತಿ ಸದಸ್ಯರು ಪಟ್ಟು ಹಿಡಿದರು.
‘ಸುಮಾರು 30 ವರ್ಷಗಳಿಂದ ಸವಣೂರಿನಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಮುಸ್ಲಿಂ ಸಮುದಾಯದವರು ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿಲ್ಲ. ಪೊಲೀಸರು ಮಾತ್ರ ಮೆರವಣಿಗೆ ನಡೆಸದಂತೆ ತಡೆದಿದ್ದಾರೆ’ ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹೇಶ ಅಸಮಾಧಾನ ವ್ಯಕ್ತಪಡಿಸಿದರು.
ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸುಮಾರು 500 ಮೀಟರ್‌ವರೆಗೆ ತೆರಳಿದ್ದ ಗಣೇಶ ಮೂರ್ತಿಯನ್ನು ಸಮಿತಿ ಸದಸ್ಯರು ವಾಪಸ್ ತೆಗೆದುಕೊಂಡು ದೇವಸ್ಥಾನಕ್ಕೆ ಕೊಂಡೊಯ್ದು ಪುನಃ ಪ್ರತಿಷ್ಠಾಪಿಸಿದರು.
ಮುಂದಿನ ದಿನಗಳಲ್ಲಿ ಗಣೇಶೋತ್ಸವ ಸಮಿತಿಗಳ ಸಭೆ ಕರೆದು ಈ ಕುರಿತು ಚರ್ಚಿಸಿ, ಎಲ್ಲ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯನ್ನು ರಾಜಬೀದಿಯಲ್ಲಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಿತಿ ಅಧ್ಯಕ್ಷ ಮಹೇಶ ತಿಳಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಯಾವುದೇ ಗಲಾಟೆ ಸಂಭವಿಸಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಗಣೇಶ ದೇವಸ್ಥಾನದ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.