ಹಾನಗಲ್ಲ ತಾಲೂಕಿನ ಆಡೂರು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು, ರೈತರು ಪ್ರತಿಭಟನೆ ನಡೆಸಿದರು. ಮೂಕಪ್ಪ ಪಡೆಪ್ಪನವರ, ಮುತ್ತಪ್ಪ ಪವಾಡಿ, ಬಸವರಾಜ ಮಲ್ಲಾಡದ, ಶೇಖರಯ್ಯ ಹಿರೇಮಠ ಇತರರಿದ್ದರು. 
ಹಾವೇರಿ

ಸರ್ಕಾರದ ನಿರ್ಲಕ್ಷೃ ಖಂಡಿಸಿ ಪ್ರತಿಭಟನೆ

ಹಾನಗಲ್ಲ: ನೀರಾವರಿ ಯೋಜನೆಗಳ ನಿರ್ವಹಣೆಯ ವೈಫಲ್ಯ, ಬೆಳೆ ವಿಮೆ ಪರಿಹಾರ ವಿಳಂಬ, ವಿದ್ಯುತ್ ಸಮಸ್ಯೆ ಪರಿಹಾರ ಬಗ್ಗೆ ಸರ್ಕಾರದ ನಿರ್ಲಕ್ಷೃ ಖಂಡಿಸಿ ಜೆಡಿಎಸ್ ತಾಲೂಕು ಘಟಕ ತಾಲೂಕಿನ ಆಡೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ಬಾಳಂಬೀಡ ಏತ ನೀರಾವರಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಡೂರು ಕೆರೆಗೆ ಈ ವರೆಗೂ ಒಂದೂ ಹನಿ ನೀರು ಬಂದಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ಹೇಳಿ ಪಾರಾಗುತ್ತಿದ್ದಾರೆ. ಬೆಳೆ ವಿಮೆ ಪರಿಹಾರ ಬರುತ್ತಿಲ್ಲ. ಹನಿ ನೀರಾವರಿ ಬಿಲ್‌ಗಳು ವರ್ಷಾನುಗಟ್ಟಲೆ ಬಾಕಿಯಿವೆ. ಇದಕ್ಕೆಲ್ಲ ಯಾರು ಹೊಣೆ ಎಂದು  ಪ್ರಶ್ನಿಸಿದರು.
ಹಾವೇರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಬಸಾಪುರ ಏತ ನೀರಾವರಿ ಯೋಜನೆಯ ಟಿಸಿಯಲ್ಲಿನ ಇಂಧನ ಹಾಗೂ ತಾಮ್ರದ ತಂತಿ ಕಳವಾದ ಬಗ್ಗೆ ಕೇವಲ ದೂರು ಕೊಟ್ಟು ನೀರಾವರಿ ಇಲಾಖೆ ಸುಮ್ಮನಾಗಿದೆ. ತಿಂಗಳುಗಟ್ಟಲೇ ಸಮಯ ಕಳೆದಿದ್ದರೂ ದುರಸ್ತಿಗೊಳಿಸಿ ಏತ ನೀರಾವರಿ ಆರಂಭಿಸುವಲ್ಲಿ ಯುಟಿಪಿ ಇಲಾಖೆ ನಿರ್ಲಕ್ಷ ತೋರಿದೆ ಎಂದು ಆಪಾದಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ, ಪೈಪ್ ಒಡೆಯುತ್ತಿವೆ ಎಂದು ಹೇಳಿ ಹಲವು ಕೆರೆ ತುಂಬಿಸುವಲ್ಲಿ ನೀರಾವರಿ ಇಲಾಖೆಗಳು ವಿಫಲವಾಗಿವೆ. ಜನಪ್ರತಿನಿಧಿಗಳು ಈ ಬಗ್ಗೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುತ್ತಿಲ್ಲ. ಇದು ರೈತರನ್ನು ಒಕ್ಕಲೆಬ್ಬಿಸುವ ತಂತ್ರ ಎಂದು ದೂರಿದರು.
ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯವಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮನಸಿಲ್ಲ.  ಇಲ್ಲಿ ಕಾರ್ಖಾನೆಗಳಿಲ್ಲ. ಯಾವುದೇ ಉದ್ಯಮಗಳೂ ಇಲ್ಲ. ಕೃಷಿಯನ್ನೇ ಅವಲಂಬಿಸಿದ ರೈತರಿಗಾಗಿ ಕೆಲಸ ಮಾಡುವ ಅಧಿಕಾರಿಗಳಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಪ್ರತಿಭಟನೆಯಲ್ಲಿ ಮೂಕಪ್ಪ ಪಡೆಪ್ಪನವರ, ಮುತ್ತಪ್ಪ ಪವಾಡಿ, ಬಸವರಾಜ ಮಲ್ಲಾಡದ, ಶೇಖರಯ್ಯ ಹಿರೇಮಠ, ಎಸ್.ವಿ. ಸಂಗೂರಮಠ,  ಚಂದ್ರು ಗೌರಕ್ಕನವರ, ಸೋಮನಗೌಡ ಗೋರೆಗೌಡ್ರ, ಫಯಾಜ ಮಣೆಗಾರ, ಮಂಜುನಾಥ ಕುಂಚಿಗೇರಿ, ಯಲ್ಲಪ್ಪ ಮನಗೌಡ್ರ, ಚಂದ್ರಣ್ಣ ನಿಕ್ಕಮ್, ಫಕೀರಗೌಡ ಪಾಟೀಲ, ಜಗದೀಶ ಎಲಿಗಾರ, ಈರಪ್ಪ ಕೋಡಿಹಳ್ಳಿ, ಚಂದ್ರು ಕುರಿಮನಿ, ಮೋಹನ್ ಕೋಟಿ, ಬಸವರಾಜ ಕೋಟಿ ಇತರರು ಪಾಲ್ಗೊಂಡಿದ್ದರು.

ರಸ್ತೆ ತಡೆ ನಡೆಯಲಿಲ್ಲ

ರೈತರು ವಾಹನ ಸಂಚಾರ ತಡೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ರೈತರು, ಪೊಲೀಸರ ನಡುವೆ ವಾಗ್ವಾದ ನಡೆಯಿತು.  ಸಂಚಾರಕ್ಕೆ ತೊಂದರೆಯಾಗದಂತೆ ಶಾಂತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಸೂಚಿಸಿದರು. ಪ್ರತಿಭಟನಾ ಸ್ಥಳಕ್ಕೆ ಎಡಿಎ ಸಿ.ಟಿ. ಸುರೇಶ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಿ.ಆರ್. ವೀರಭದ್ರಸ್ವಾಮಿ, ಬೃಹತ್ ನೀರಾವರಿ ಇಲಾಖೆಯ ಎಇಇ ಎನ್.ಗಿರೀಶ ಪ್ರತಿಭಟನಾ ಸ್ಥಳದಲ್ಲಿದ್ದು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಆಡೂರು ಪಿಎಸ್‌ಐ ಕುಮಾರ ಕೂರಗುಂದ್ ಮತ್ತು ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.