ಬ್ಯಾಡಗಿ ಕೆಪಿಸಿಸಿ ಕಾರ್ಯಾಲಯದಲ್ಲಿ ಎಐಸಿಸಿ ವೀಕ್ಷಕ ಶೇಖ್ ಮುಷ್ತಾಕ್ ವಲಿ ಅವರನ್ನು ಎಸ್.ಆರ್.ಪಾಟೀಲ ಸನ್ಮಾನಿಸಿದರು. ದಾನಪ್ಪ ಚೂರಿ, ಲಕ್ಷ್ಮೀ ಜಿಂಗಾಡೆ, ಡಿ.ಬಸವರಾಜು ಇತರರಿದ್ದರು. 
ಹಾವೇರಿ

ಕೈ ಹಿಡಿಯಲಿವೆ ಪಂಚ ಗ್ಯಾರಂಟಿ five guarantees

ವೀರೇಶ ಸೌದ್ರಿ
ಬ್ಯಾಡಗಿ: ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕೈಹಿಡಿಯಲಿದ್ದು, ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ತೆರಳಿ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುವಂತೆ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.  
ಪಟ್ಟಣದ ಕೆಪಿಸಿಸಿ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು. ಸರ್ಕಾರ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಸರ್ಕಾರ ರಚನೆಯಾಗಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಅಗತ್ಯವಾದ ಗೃಹಲಕ್ಷ್ಮೀ, ಶಕ್ತಿ ಯೋಜನೆ, ಗೃಹಜ್ಯೋತಿ, ನಿರುದ್ಯೋಗ ಭತ್ಯೆ, ಪಡಿತರ ಪೂರೈಕೆ ಮೂಲಕ ಬಡವರಿಗೆ ಯೋಜನೆಗಳು ಆಶಾಕಿರಣವಾಗಿವೆ ಎಂದರು.
ಆರ್ಥಿಕವಾಗಿ ಹಿಂದುಳಿದ ಬಹುತೇಕ ಕುಟುಂಬಗಳಿಗೆ ಆಸರೆಯಾಗಿರುವ ಗೃಹಲಕ್ಷ್ಮೀ ಯೋಜನೆಯಿಂದ ಸಾಕಷ್ಟು ಮಹಿಳೆಯರು ಸ್ವ ಉದ್ಯೋಗ, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಅರ್ಹರಿಗೆ ಮಾತ್ರ ಸಿಗಬೇಕೆನ್ನುವುದು ಸರ್ಕಾರದ ಧ್ಯೇಯವಾಗಿದ್ದು ಈ ಕುರಿತು ಪರಿಶೀಲನೆ ಕಾರ್ಯ ಅಧಿಕಾರಿಗಳ ಹಂತದಲ್ಲಿ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೂಡ ಬಡವರ ಹಾಗೂ ರೈತರ ಹಿತ ಕಾಯುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ರಾಜ್ಯದಲ್ಲಿ 2 ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ಜರುಗಲಿವೆ ಎಂದರು. 
ಎಐಸಿಸಿ ವೀಕ್ಷಕ ಶೇಖ್ ಮುಷ್ತಾಕ್ ವಲಿ ಹಾಗೂ ಜಿಲ್ಲಾ ವೀಕ್ಷಕ ಡಿ.ಬಸವರಾಜು ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಜಿಂಗಾಡೆ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್‌ಮುನಾಫ್ ಎರೆಸೀಮೆ, ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ, ರಮೇಶ ಸುತ್ತಕೋಟಿ, ಖಾದರಸಾಬ್ ದೊಡ್ಮನಿ, ಡಿ.ಎಚ್. ಬುಡ್ಡನಗೌಡ್ರ ಇತರರಿದ್ದರು.