ಬ್ಯಾಡಗಿ ತಾಲೂಕಿನ ಬನ್ನಿಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ನಿರ್ಮಿಸಿಕೊಂಡ ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿರುವುದು. 
ಹಾವೇರಿ

ಬರವಸೆಯಾದ ಕೃಷಿಹೊಂಡಗಳು: Farm pond

ಮಂಜುನಾಥ ಗದಗಿನ
ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ
ಹರಿದು ಹೋಗುವ ಮಳೆ ನೀರು ಸಂಗ್ರಹಿಸಿ ಬೆಳೆಗೆ ನೀರಿನ ಕೊರತೆಯಾದಲ್ಲಿ ಕೃಷಿಗೆ ಬಳಕೆ ಮಾಡಿಕೊಳ್ಳುವುದು, ಹೊಲಗಳಲ್ಲಿ ನೀರು ನಿಲ್ಲಿಸಿ ಅಂತರ್ಜಲಮಟ್ಟ ಹೆಚ್ಚಳದೊಂದಿಗೆ ಸಮಗ್ರ ಬೇಸಾಯ ಪದ್ಧತಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಾರಿಗೊಂಡ ಕೃಷಿ ಭಾಗ್ಯ ಯೋಜನೆ ಬರಗಾಲದಲ್ಲಿ ಸಾಕಷ್ಟು ಮಹತ್ವ ಪಡೆದಿದ್ದು, ತಾಲೂಕಿನಲ್ಲಿ ನಿರ್ಮಿಸಿದ ನೂರಾರು ಕೃಷಿ ಹೊಂಡಗಳು ರೈತರ ಪಾಲಿಗೆ ವರದಾನವಾಗಿವೆ.
ಮಳೆಕೊರತೆ, ತೀವ್ರ ಬರಗಾಲ, ಅತಿವೃಷ್ಟಿ, ಅನಾವೃಷ್ಟಿಗಳ ಮಧ್ಯೆ ಕೃಷಿಕರ ಜೀವನ ಈಗ ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ರೈತರಿಗೆ ಫಲದಾಯಕವಾಗಿದೆ. ಕೃಷಿ ತಜ್ಞರ ಸಲಹೆ, ಶಿಪಾರಸ್ಸು, ನೀರಿನ ಮಹತ್ವದ ಮೂಲ ಉದ್ದೇಶದಿಂದ ಜಾರಿಗೊಂಡ ಯೋಜನೆ ಕೃಷಿ ವಲಯಕ್ಕೆ ಸಾಕಷ್ಟು ಅನುಕೂಲವಾಗಿವೆ. ಕೃಷಿ ಇಲಾಖೆ ಈ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದ್ದು, ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ರೈತರೇ ಖುದ್ದಾಗಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಮುಂದಾಗಿರುವುದು ಕೃಷಿ ಅಭಿವೃದ್ಧಿಗೆ ಪೂರಕವಾಗಿದೆ.
2014ರಲ್ಲಿ ಜಾರಿಗೊಂಡಿದ್ದ ಕೃಷಿ ಭಾಗ್ಯ ಯೋಜನೆ, ಕೆಲವರ್ಷಗಳ ಕಾಲ ಸ್ಥಗಿತಗೊಂಡು ಪುನರ್ 2023ರಲ್ಲಿ ಆರಂಭವಾಗಿದೆ. ತಾಲೂಕಿನ ಬ್ಯಾಡಗಿ, ಕಾಗಿನೆಲೆ ಹೋಬಳಿ ಸೇರಿದಂತೆ ಎಲ್ಲ ಗ್ರಾಮಗಳ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. 2024-25 ರಲ್ಲಿ 57 ಜನ ರೈತರು, 2025-26 ರಲ್ಲಿ 72 ರೈತರು, ಹಾಗೂ 2026-27 (ಆಗಸ್ಟ್‌ವರೆಗೆ) 35 ರೈತರು ಯೋಜನೆ ಲಾಭ ಪಡೆದಿದ್ದಾರೆ. ಚಿಕ್ಕಬಾಸೂರು, ಘಾಳಪೂಜಿ, ಹಿರೇಹಳ್ಳಿ, ಸಿದ್ದಾಪುರ, ಹೆಡಿಗ್ಗೊಂಡ, ಶಿಡೇನೂರು, ಕೊಲ್ಲಾಪುರ, ಬನ್ನಿಹಟ್ಟಿ, ಕದರಮಂಡಲಗಿ, ಶಿಡೇನೂರು, ಕೆರೂಡಿ, ಮಾಸಣಗಿ, ಮೋಟೆಬೆನ್ನೂರು, ಕಲ್ಲೆದೇವರು, ಗುಂಡೇನಹಳ್ಳಿ, ಬಿಸಲಹಳ್ಳಿ, ಮತ್ತೂರು, ಹಿರೇಅಣಜಿ, ಛತ್ರ ಗ್ರಾಪಂನ ವಿವಿಧ ಗ್ರಾಮಗಳಲ್ಲಿ 164 ಹೊಂಡಗಳನ್ನು ಈಗಾಗಲೇ ನಿರ್ಮಿಸಿಕೊಂಡಿದ್ದು, ರೈತರ ಪಾಲಿಗೆ ಬರಗಾಲದಲ್ಲಿ ವರವಾಗುತ್ತಿವೆ. ಮಳೆಗಾಲದ ಹರಿದುಹೋಗುವ ನೀರು, ಕೊಳವೆ ಬಾವಿಯ ನೀರನ್ನು ಸಂಗ್ರಹಿಸಿಕೊಂಡ ರೈತರು ಹನಿ ನೀರಾವರಿ ಪದ್ಧತಿಯಲ್ಲಿ ತಮ್ಮ ಬೆಳೆಗಳಿಗೆ ಬಳಸುವ ಮೂಲಕ ಕೃಷಿಯಲ್ಲಿ ತೊಡಗಿದ್ದಾರೆ.
"

ಸ್ವಂತ ಹಣದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಕಷ್ಟಸಾದ್ಯವಾಗಿತ್ತು. ಕೃಷಿ ಭಾಗ್ಯ ಯೋಜನೆ ನನ್ನ ಪಾಲಿಗೆ ದೊಡ್ಡ ವರದಾನವಾಗಿದೆ. ಮಳೆ ಕೈಕೊಟ್ಟಾಗ ಹಾಗೂ ಬೇಸಿಗೆಯಲ್ಲಿ ನೀರಿನ ತೊಂದರೆ ಉಂಟಾದ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಕೃಷಿ ಹೊಂಡ ಹೆಚ್ಚು ಅನುಕೂಲವಾಗಿದೆ.

"

ಕೋಟ್: 2014ರಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಿಸುವ ಕಾರ್ಯಕ್ರಮ ಜಾರಿಗೊಂಡಿದೆ. ಎರಡ್ಮೂರು ವರ್ಷಗಳಲ್ಲಿ 164 ಹೊಂಡಗಳ ನಿರ್ಮಾಣವಾಗಿದ್ದು, 200 ಹೊಂಡಗಳ ನಿರ್ಮಿಸುವ ಗುರಿಯಿದೆ.