ಬ್ಯಾಡಗಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಮಾತನಾಡಿದರು. 
ಹಾವೇರಿ

green waste ಹಸಿ ಕಸ ಸಂಸ್ಕರಣಾ ಘಟಕ ಸ್ಥಾಪನೆ

ಬ್ಯಾಡಗಿ: ಪಟ್ಟಣದ ಸಂತೆ ಮೈದಾನದ ಬಳಿ ತರಕಾರಿ ಹಸಿ ಕಸ (green waste) ಸಂಸ್ಕರಣಾ ಘಟಕ ಸ್ಥಾಪಿಸುವ ಮೂಲಕ ಸುತ್ತಲಿನ ಪರಿಸರ ಕಾಪಾಡಬೇಕಿದೆ. ನೂತನ ಘಟಕ ನಿರ್ವಿುಸಲು ಪ್ರಸ್ತಾವನೆ (ಡಿಪಿಆರ್) ಸಲ್ಲಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕೆಲದಿನಗಳ ಹಿಂದೆ ಸದಸ್ಯರು ಕೊಯಿಮತ್ತೂರು, ಹೈದ್ರಾಬಾದ್ ಹಸಿ ಕಸ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ಅಧ್ಯಯನ ಮಾಡಿ ಬಂದಿದ್ದಾರೆ. ಹೈದ್ರಾಬಾದ್ ಮಾದರಿಯ ಘಟಕವನ್ನು ಬ್ಯಾಡಗಿಯ ತರಕಾರಿ ಮಾರುಕಟ್ಟೆಯಲ್ಲಿ ಸ್ಥಾಪಿಸಿದಲ್ಲಿ ಅನುಕೂಲವಾಗಲಿದೆ. ಘಟಕ ಸ್ಥಾಪನೆಗೆ ಅಂದಾಜು 10 ಲಕ್ಷ ರೂ. ವೆಚ್ಚವಾಗಲಿದೆ ಎಂದರು.
ಸದಸ್ಯ ಬಸವರಾಜ ಛತ್ರದ ಮಾತನಾಡಿ, ನಿವೇಶನ ಹಕ್ಕುಪತ್ರದ ಫಲಾನುಭವಿ ಪಟ್ಟಿಯಲ್ಲಿ ಅನರ್ಹರು ಸೇರ್ಪಡೆಯಾಗಿದ್ದಾರೆ. ಅಂತಹವರನ್ನು ಪಟ್ಟಿಯಿಂದ ಕೈಬಿಡಬೇಕು. ಸದಸ್ಯರು ಸೇರಿದಂತೆ ಯಾರೇ ಹೇಳಿದರೂ ಅಂತಹವರ ಮಾಹಿತಿ ಗೌಪ್ಯವಾಗಿಡಬೇಕು. ಪಟ್ಟಿಯಲ್ಲಿ ಹೆಸರಿರುವವರ ದಾಖಲೆ, ವಿವರಗಳನ್ನು ಅಧಿಕಾರಿಗಳೇ ಪರಿಶೀಲಿಸಬೇಕು. ಅರ್ಹರನ್ನು ಉಳಿಸಿಕೊಂಡು, ಅನರ್ಹರನ್ನು ತೆಗೆದುಹಾಕಬೇಕು. ಹೊಸ ಫಲಾನುಭವಿಗಳನ್ನು ಪಾರದರ್ಶಕವಾಗಿ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಟೀಚರ್ ಕಾಲನಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಸರಿಪಡಿಸಬೇಕು ಎಂದು ವಿನಯಕುಮಾರ ಹಿರೇಮಠ ಹಾಗೂ ಅಂಗನವಾಡಿ ಗೇಟ್ ಅನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಮುರಿದಿದ್ದಾರೆ. ಕಿಡಿಗೇಡಿಗಳನ್ನು ಸಿಸಿ ಕ್ಯಾಮರಾ ಸಹಾಯದಿಂದ ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಸದಸ್ಯ ಶಂಕರ ಕುಸಗೂರು ಆಗ್ರಹಿಸಿದರು.
ವಿವಿಧ ವಿಷಯಗಳ ಚರ್ಚೆ: ಪಟ್ಟಣದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ನೀರು ಶುದ್ಧೀಕರಣ ಯಂತ್ರ ವಿತರಿಸುವುದು, ಎಸ್​ಎಫ್​ಸಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ದರ ಮಂಜೂರಾತಿ ನೀಡುವುದು, ಪುರಸಭೆ ವ್ಯಾಪ್ತಿಯ ಏಕ ನಿವೇಶನ, ಬಹು ನಿವೇಶನ, ಲೇಔಟ್​ಗಳಿಗೆ ಎಡಿಟಿಪಿಯ ಅನುಮೋದನೆ, ತಾತ್ಕಾಲಿಕ ವಿನ್ಯಾಸ ನಕ್ಷೆ, ಅಂತಿಮ ನಕ್ಷೆಗೆ ಅನುಮೋದನೆ ನೀಡುವ ಮೇಲ್ವಿಚಾರಣೆ ಶುಲ್ಕ ಭರಣಾ ಮಾಡಿಸಿಕೊಂಡು ಖಾತಾ ದಾಖಲು ಮಾಡುವ ಕುರಿತು ಚರ್ಚೆ ನಡೆದವು.
ಸಭೆಗೆ ಪೊಲೀಸ್ ಕಾವಲು: ಪುರಸಭೆ ಆವರಣದಲ್ಲಿ ನ. 4ರಂದು ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಮಹಿಳೆಯರಿಂದ ಪ್ರತಿಭಟನೆ ಜರುಗಿತ್ತು. ಬುಧವಾರ ಸಾಮಾನ್ಯ ಸಭೆ ಇರುವ ವಿಷಯ ತಿಳಿದು ಕೆಲವರು ಹಕ್ಕುಪತ್ರ ಪಡೆದುಕೊಳ್ಳಲು ಸ್ಥಳೀಯರು ಜಮಾಯಿಸಿದ್ದರು. 
ಪುರಸಭೆ ಆವರಣದಲ್ಲಿ ಮಹಿಳೆಯರು ಓಡಾಡುತ್ತಿರುವುದನ್ನು ಗಮನಿಸಿ, ಮುಂಜಾಗ್ರತೆಯಿಂದ ಪೊಲೀಸ್ ಸಿಬ್ಬಂದಿ ಭದ್ರತೆಗೆ ಆಗಮಿಸಿದ್ದರು. ಸಭಾಭವನದತ್ತ ತೆರಳದಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಭೆ ಮುಗಿಯುವರೆಗೂ ಹೊರಗೆ ನಿಂತ ಸ್ಥಳೀಯರು, ಕೊನೆಗೆ ಸುಮ್ಮನೆ ವಾಪಸ್ ತೆರಳಿದರು.