ಹಾವೇರಿ

ತಮ್ಮನ ಕೊಲೆಗೆ ಯತ್ನಿಸಿದ ಅಣ್ಣನಿಗೆ ಜೈಲುಶಿಕ್ಷೆ

ಹಾವೇರಿ: ಜಮೀನು ಉಳಿಮೆ ಮಾಡುವ ವಿಚಾರಕ್ಕೆ ಜಗಳ ಮಾಡಿ ತಮ್ಮನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ ಅಣ್ಣನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎನ್.ಎಂ. ರಮೇಶ ತೀರ್ಪು ನೀಡಿ ಆದೇಶಿಸಿದ್ದಾರೆ.

ಸವಣೂರ ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದ ದೇವಪ್ಪ ನಾಗಪ್ಪ ಗುದಗಿ ಶಿಕ್ಷೆಗೊಳಗಾದ ಅಪರಾಧಿ.

ಈತ ತನ್ನ ತಮ್ಮನಾದ ಮಂಜಪ್ಪ ಗುದಗಿ ಮೇಲೆ 2025 ಮೇ 29ರಂದು ಜಮೀನಿನ ವಿಚಾರಕ್ಕೆ ಜಗಳ ತೆಗೆದು ಕೊಡಲಿಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ್ದ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.