ಶಿಗ್ಗಾಂವಿ ಪಟ್ಟಣದ ಶ್ರೀ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಕಿವುಡ-ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಪಾಲಕರ ಸಮಾವೇಶ ಆಯೋಜಿಸಲಾಗಿತ್ತು. ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜು ಕುನ್ನೂರ, ನಾಗರಾಜ ದ್ಯಾಮನಕೊಪ್ಪ ಇತರರಿದ್ದರು. 
ಹಾವೇರಿ

Education - ಶಿಕ್ಷಣಕ್ಕಿದೆ ಬದುಕಿನ ದಿಕ್ಕು ಬದಲಾಯಿಸುವ ಶಕ್ತಿ

ದೀಪಕ ತಲವಾಯಿ
ಶಿಗ್ಗಾಂವಿ: ಅಂಗವಿಕಲ ಮಕ್ಕಳು ಎಲ್ಲರಂತೆ ಸಹಜವಾಗಿ ಬದುಕಲು ಶಿಕ್ಷಣ (Education) ಬಹಳ ಮುಖ್ಯವಾಗಿದೆ. ಶಿಕ್ಷಣವು ಅವರ ಬದುಕಿನ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದ್ದು, ಇಂತಹ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬಿ ಮನೋಭಾವ ಬೆಳೆಸುವುದು ಅಗತ್ಯವೆಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಶ್ರೀ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳವರ ಕಿವುಡ-ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಿವುಡ-ಮೂಕ ಮಕ್ಕಳು ಹಾಗೂ ಪಾಲಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಲಕರು ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ವಿಶಿಷ್ಟ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಾಜು ಎಂ. ಕುನ್ನೂರ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಿವುಡ-ಮೂಕ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಸಂಸ್ಥೆ ನಿರಂತರವಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಶಿಕ್ಷಣದ ಜತೆಗೆ ಸಾಂಸ್ಕೃತಿಕ, ವೃತ್ತಿಪರ ಹಾಗೂ ವ್ಯಕ್ತಿತ್ವ ವಿಕಸನ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷೆ ಸ್ನೇಹಲತಾ ಕುನ್ನೂರ ಮಾತನಾಡಿ, ವಿಶೇಷ ಮಕ್ಕಳಿಗೆ ಪ್ರೀತಿ, ಸಹಾನುಭೂತಿ ಮತ್ತು ಸಮರ್ಪಕ ಶಿಕ್ಷಣ ದೊರೆತಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಪ್ರಾಚಾರ್ಯ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಮಾತನಾಡಿ, ಕಿವುಡ-ಮೂಕ ಮಕ್ಕಳಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ದೊರಕಬೇಕಾದರೆ ಪಾಲಕರು, ಶಿಕ್ಷಕರು ಹಾಗೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ, ಶಿಸ್ತು ಹಾಗೂ ಸೃಜನಶೀಲತೆ ಬೆಳೆಸುವಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಸಿದ್ದಪ್ಪ ಮಸಳಿ, ಮಂಜುಳಾ ಗೋಡಿ, ರೇಣುಕಾ ಮಾಗಿ, ಅರ್ಪಿತಾ ಅರೋರಾ, ವೈಷ್ಣವಿ ಕುನ್ನೂರ, ಮುಖ್ಯೋಪಾಧ್ಯಾಯ ಎಂ.ಬಿ. ನೀರಲಗಿ ಇತರರಿದ್ದರು. ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಕ್ಕಳು ಹಾಗೂ ಪಾಲಕರು ತಮ್ಮ  ಅನುಭವಗಳನ್ನು ಹಂಚಿಕೊಂಡರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಶ್ವೇತಾ ಅತ್ತಿಗೇರಿ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ನೀರಲಗಿ ವಂದಿಸಿದರು.