ಶಿಗ್ಗಾಂವಿ ಪಟ್ಟಣದ ಜೆಎಂಜೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಜ್ಜು ಕನೆಕ್ಟ್ 2026 ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂಬಿ ಅಂಬಿಗೇರ ಉದ್ಘಾಟಿಸಿದರು. ಇಒ ಮಂಜುನಾಥ ಸಾಳುಂಕೆ, ಅರುಣಗೌಡ ಹುಡೇದಗೌಡ್ರ, ಕವಿತಾ ಮಠದ ಇತರರಿದ್ದರು. 
ಹಾವೇರಿ

ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕಾರ್ಯೋನ್ಮುಖರಾಗಿ

ಮಂಜುನಾಥ ಗದಗಿನ
ಶಿಗ್ಗಾಂವಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಮುಖವಾಗಿದ್ದು, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹೆಚ್ಚು ಆಸಕ್ತದಾಯಕರಾಗಿ ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ಪಟ್ಟಣದ ಜೆಎಂಜೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಜೆಎಂಜೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದಲ್ಲಿ ಶನಿವಾರ ನಡೆದ ‘ಎಜ್ಜು ಕನೆಕ್ಟ್ 2026’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಪ್ರಸ್ತುತ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳ ಫಲಿತಾಂಶದ ಸಾಧನೆಯನ್ನು ನೂರಕ್ಕೆ ನೂರರಷ್ಟು ಉತ್ತಮಗೊಳಿಸುವಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಪ್ರೌಢ ಶಾಲಾ ಶಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ತಾಪಂ ಇಒ ಮಂಜುನಾಥ ಸಾಳುಂಕೆ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ನಮ್ಮ ತಾಲೂಕು 4ನೇ ಸ್ಥಾನ ಪಡೆದುಕೊಂಡಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಸ್ಥಾನದಲ್ಲಿ ಬರುವಂತೆ ತಾಲೂಕಿನ ಪ್ರತಿಯೊಬ್ಬ ಶಿಕ್ಷಕರು ವಿಷಯವಾರು ಹೆಚ್ಚಿನ ಒತ್ತುಕೊಟ್ಟು, ಮಕ್ಕಳು ಹೆಚ್ಚಿನ ಪ್ರಗತಿ ಸಾಧಿಸಲು ಶ್ರಮ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ, ಕವಿತಾ ಮಠದ, ಶೇಖರ ಹಂಚಿನಮನಿ, ಬಿ.ಶ್ರೀನಿವಾಸ, ರಾಜಶೇಖರ ಹೆಸರೂರ, ಗುರುರಾಜ ಹುಚ್ಚಣ್ಣನವರ, ಶಬ್ಬಿರ ಮನಿಯಾರ, ಪಿ.ಎಫ್. ಕರಿಶಿವಣ್ಣವರ, ಉಮೇಶ ಎಸ್.ಆರ್., ಬಿ.ಎಸ್. ಹಿರೇಮಠ, ಅಬ್ದುಲ್ಲಖಾದರ್ ಕಡೆಮನಿ, ಸುರೇಶ ಕ್ಷೌರದ ಸೇರಿದಂತೆ ತಾಲೂಕಿನ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಇದ್ದರು.