ರಟ್ಟಿಹಳ್ಳಿ ಪಟ್ಟಣದ 14ನೇ ವಾರ್ಡ್ ಪಾಂಡುರಂಗನ ದೇವಸ್ಥಾನದ ಬಳಿ ಗಟಾರ ಇಲ್ಲದೇ ನಿಂತಿರುವ ಕೊಳಚೆ ನೀರು. 
ಹಾವೇರಿ

drainage problem: ಕೊಳಚೆ ಖಚಿತ..ರೋಗ ಉಚಿತ!

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ
ಪಟ್ಟಣದ 14ನೇ ವಾರ್ಡ್‌ನಲ್ಲಿ ಗಟಾರ ಸಮರ್ಪಕ ನಿರ್ವಹಣೆ ಇಲ್ಲದೆ ಅಸ್ವಚ್ಛತೆ ತಾಂಡವಾಗುತ್ತಿದೆ. ಹೀಗಾಗಿ ವಾರ್ಡ್‌ನ ನಾಗರಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಉಲ್ಭಣಿಸಿದೆ. 
ಓಣಿಯ ಎರಡು ಬದಿಯಲ್ಲಿ ಯಾವುದೇ ಗಟಾರ ನಿರ್ಮಾಣ ಮಾಡದೆ ಇರುವುದರಿಂದ ಎಲ್ಲ ಮನೆಗಳ ತ್ಯಾಜ್ಯ ಮತ್ತು ಕೊಳಚೆಯ ನೀರು ಮನೆಗಳ ಮುಂದೆ ನಿಂತು ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನ ದುರ್ವಾಸನೆಯಿಂದ  ನಿವಾಸಿಗಳು ಬೇಸತ್ತು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರ ಪರಿಣಾಮವಾಗಿ ಒಂದು ತಾತ್ಕಾಲಿಕ ಗುಂಡಿ ನಿರ್ಮಾಣ ಮಾಡಲಾಗಿದೆ. ಕೊಳಚೆ ನೀರಿ ಈ ಗುಂಡಿಗೆ ಬಂದು ನೇರವಾಗಿ ಸೇರುತ್ತಿದೆ. ಆ ನೀರು ಮುಂದೆ ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕೆ ಗಬ್ಬೇದ್ದು ನಾರುತ್ತಿದೆ. ಗುಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಓಣಿಯಲ್ಲಿ ಪಾಂಡುರಂಗನ ದೇವಸ್ಥಾನ ಇರುವುದರಿಂದ ನಿತ್ಯ ಆಗಮಿಸುವ ಭಕ್ತರಿಗೆ ಇಲ್ಲಿನ ಕೊಳಚೆಯ ದುರ್ವಾಸನೆ ಕಿರಿಕಿರಿಯಾಗುತ್ತದೆ. 
ಗಟಾರ ವ್ಯವಸ್ಥೆ ಇಲ್ಲದೇ ಇರುವುದರಿಂದ ಬರುವ ಮಳೆಗಾಲದಲ್ಲಿ ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ರಸ್ತೆಗಳಲ್ಲಿ ನೀರು ಹರಿದು ಮನೆಗಳಿಗೂ ನುಗ್ಗುತ್ತದೆ. ಕೂಡಲೇ ಸ್ಥಳೀಯ ಪ.ಪಂ. ರಸ್ತೆಯ ಎರಡು ಬದಿಯಲ್ಲಿ ಗಟಾರ ನಿರ್ಮಾಣ ಮಾಡಬೇಕು. ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ನಿವಾಸಿಗಳು ಒತ್ತಾಯವಾಗಿದೆ. 
"

ಪಟ್ಟಣದ 14ನೇ ವಾರ್ಡ್‌ನ ಪಾಂಡುರಂಗನ ದೇವಸ್ಥಾನದ ಬಳಿ ಅನೇಕ ವರ್ಷಗಳಿಂದ ಗಟಾರ ನಿರ್ಮಾಣ ಮಾಡಿಲ್ಲ. ಇದರಿಂದ ಕೊಳಚೆ ನೀರು ನಿಂತಲ್ಲಿ ನಿಂತು ಅನೇಕ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ. ಈ ಬಗ್ಗೆ ಪ.ಪಂ.ಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ವೀರಭದ್ರಪ್ಪ ಸುಣಗಾರ ಸ್ಥಳೀಯ ನಿವಾಸಿ ರಟ್ಟಿಹಳ್ಳಿ.


ಪಾಂಡುರಂಗ ದೇವಸ್ಥಾನದ ಬಳಿ ರಾಮಣ್ಣ ಗೋಣೆಪ್ಪನವರ ಮನೆಯಿಂದ ಈರಣ್ಣ ತಹಸೀಲ್ದಾರ್ ಮನೆಯವರೆಗೆ ಗಟಾರ ನಿರ್ಮಾಣ ಮಾಡಲು 16ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಯೋಜನೆಯು ಅನುಮೋದನೆಗೆ ಕಳುಹಿಸಲಾಗಿದೆ. ಶೀಘ್ರ 14ನೇ ವಾರ್ಡ್‌ನ ಪಾಂಡುರಂಗ ದೇವಸ್ಥಾನದ ಬಳಿ ಗಟಾರ ನಿರ್ಮಾಣ ಮಾಡಲಾಗುವುದು. ಬಸವರಾಜ ಕಟ್ಟೀಮನಿ ಪ.ಪಂ.ಸದಸ್ಯ 14ನೇ ವಾರ್ಡ್ ರಟ್ಟಿಹಳ್ಳಿ.