ಬ್ಯಾಡಗಿ ಪಟ್ಟಣದಲ್ಲಿ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆ ವೇಳೆ ಜೆಸಿಬಿಗಳು ಕಟ್ಟಡಗಳ ತೆರವು ಮಾಡುತ್ತಿರುವುದು.
ವಿಜಯವಾಣಿ ಸುದ್ದಿಜಾಲ ಬ್ಯಾಡಗಿ
ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಕಟ್ಟಡಗಳ ತೆರವು ಕಾರ್ಯಾಚರಣೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಆರಂಭಗೊಂಡಿದ್ದು, ಮೊದಲ ದಿನ 30ಕ್ಕೂ ಅಧಿಕ ಕಟ್ಟಡಗಳನ್ನು ತೆರವು ಮಾಡಲಾಯಿತು. ಇಂದೂ ತೆರವು ಕಾರ್ಯಾಚರಣೆ ಮುಂದುವರೆಯಲಿದೆ.
ಬೆಳ್ಳಂಬೆಳ್ಳಗೆ ಪಟ್ಟಣದ ಮುಖ್ಯರಸ್ತೆ, ಸುಭಾಸ ಸರ್ಕಲ್, ರಟ್ಟಿಹಳ್ಳಿ ರಸ್ತೆ, ಬಸ್ ನಿಲ್ದಾಣಗಳ ಬಳಿ ಪೊಲೀಸ್ ವಾಹನಗಳು, 200ಕ್ಕೂ ಹೆಚ್ಚು ಖಾಕಿಧಾರಿಗಳು, ಲೋಕೋಪಯೊಗಿ ಇಲಾಖೆ, ಭೂಮಾಪನ, ಆರೋಗ್ಯ, ಅಗ್ನಿಶಾಮಕದಳ, ಹೆಸ್ಕಾಂ, ಪುರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯ ನಡೆಯಿತು.
ಜೆಸಿಬಿ ಸದ್ದು: ರಸ್ತೆ ಕಾಮಗಾರಿ ಸಂಬಂಧಿಸಿದಂತೆ 4 ಜೆಸಿಬಿ, 3 ಹಿಟಾಚಿ, ಪುರಸಭೆಯ ಟ್ರಾೃಕ್ಟರ್ ಹಾಗೂ ಇತರ ವಾಹನ ಹಾಗೂ 50ಕ್ಕೂ ಹೆಚ್ಚು ಪುರಸಭೆ ಕಾರ್ಮಿಕರು ರಸ್ತೆ ವಿಸ್ತರಣೆ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದು, ತೆರವುಗೊಳಿಸಿದ ಕಟ್ಟಡಗಳ ಅವಶೇಷಗಳನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಮುಂದಾದರು. ಮೊದಲು ಹಳೇ ಪುರಸಭೆ ಎದುರಿನ ಹೂವಿನ ಅಂಗಡಿಗಳು, ಬೇಕರಿ, ವರ್ತಕರ ಅತಿಥಿ ಗೃಹದ ವಾಣಿಜ್ಯ ಮಳಿಗೆ, ಕದಂಬ ಹೋಟೆಲ್, ಚೌಡೇಶ್ವರಿ ದೇವಸ್ಥಾನ, ಪುರಸಭೆ ವಾಣಿಜ್ಯ ಮಳಿಗೆಗಳು ಸೇರಿದಂತೆ ಬಹುತೇಕ ಕಟ್ಟಡಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು.
ಖಾಕಿ ಕಾವಲು: ಎಸ್ಪಿ ಯಶೋಧಾ ವಂಟಗೋಡಿ ನೇತೃತೃತ್ವದಲ್ಲಿ ಡಿವೈಎಸ್ಪಿ, ಪೊಲೀಸ್ ಅಧಿಕಾರಿಗಳು, ಸಿಪಿಐ, ಪಿಎಸ್‌ಐ ಸೇರಿದಂತೆ ಸುಮಾರು 200 ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ವೇಳೆ ಇದ್ದರು. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ನಡೆಯಬಾರದು ಹಾಗೂ ಮುಂಜಾಗ್ರತ ಕ್ರಮವಾಗಿ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಮುಖ್ಯರಸ್ತೆ ಹಾಗೂ ಬಸ್ ನಿಲ್ದಾಣಗಳತ್ತ ವಾಹನಗಳ ಓಡಾಟ ನಿಷೇಧಿಸುವ ಮೂಲಕ ಕಾಮಗಾರಿಗೆ ಅಡೆತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಅಲ್ಲಿಲ್ಲಿ ಬ್ಯಾರಿಕೇಡ್ ಪಕ್ಕದಲ್ಲಿ ಪೊಲೀಸ್ ಸಿಬ್ಬಂದಿ ವಾಹನಗಳು ತೆರಳದಂತೆ ಸೂಚನೆ ನೀಡುವ ಮೂಲಕ ಕರ್ತವ್ಯ ನಿರತರಾಗಿದ್ದರು.
ವಿದ್ಯುತ್ ಸ್ಥಗಿತ: ಕೆಸಿಸಿ ಬ್ಯಾಂಕ್‌ನಿಂದ ಎಸ್‌ಜೆಜೆಎಂ ಶಾಲೆಯವರಿಗೂ ವಿಸ್ತರಣೆ ಕಾಮಗಾರಿ ನಡೆಯುವ ಹಾಗೂ ತೆರವು ವಾಹನಗಳು ಓಡಾಡುವ ಸಲುವಾಗಿ ಕೆಲಕಾಲ ವಿದ್ಯುತ್ ಸ್ಥಗಿತಗೊಳಿಲಾಗಿತ್ತು. ಮುಖ್ಯರಸ್ತೆಗಳಲ್ಲಿ ಹಳೆಯ ವಿದ್ಯುತ್ ಕಂಬಗಳು, ಜೋತುಬಿದ್ದ ತಂತಿ, ಹಳೆಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಕಾರ್ಯಾಚರಣೆ ನಡೆಲಾಯಿತು.
ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ: ಬ್ಯಾರಿಕೇಡ್ ಅಳವಡಿಸಿ ಮಾಸಣಗಿ, ಹಂಸಭಾವಿ, ರಟ್ಟಿಹಳ್ಳಿ, ಕದರಮಂಡಲಗಿ, ಹಾವೇರಿ ಕಡೆಗಳಿಂದ ಬಂದು ಹೋಗುವ ಬಸ್ ಹಾಗೂ ಇತರ ವಾಹಗಳನ್ನು ಅಲ್ಲಿಲ್ಲಿ ತಡೆದು, ಬೇರೆ ಬೇರೆ ಮಾರ್ಗಗಳಿಂದ ತೆರಳಲು ಸೂಚಿಸಿದ್ದರು. ಸಾರಿಗೆ ಬಸ್‌ಗಳ ಕೊರತೆ ಹಾಗೂ ಇತ್ಯಾದಿ ಸಮಸ್ಯೆಗಳಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಸ್ವಲ್ಪ ಪರಡಾಡುವಂತಾಯಿತು. ಬೈಕ್ ಸವಾರರು ಎಲ್ಲೆಡೆ ನುಗ್ಗುವ ಮೂಲಕ ಕಿರಿಕಿರಿ ಉಂಟುಮಾಡುತ್ತಿದ್ದರೂ ಪೊಲೀಸರು ಸಮಾಧಾನದಿಂದ ಅವರಿಗೆ ಬುದ್ದಿ ಹೇಳಿ ಆ ಕಡೆ ನಡೆಯಿರಿ ಎನ್ನುವ ಮೂಲಕ ವಾತಾವರಣ ಶಾಂತಗೊಳಿಸುವಲ್ಲಿ ನಿರತರಾಗಿದ್ದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ತಹಸೀಲ್ದಾರ್ ಚಂದ್ರಶೇಖರ ನಾಯಕ, ಲೋಕೋಪಯೋಗಿ ಅಭಿಯಂತ ಆಂಜನೇಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಮೊದಲ ದಿನ 30ಕ್ಕೂ ಹೆಚ್ಚು ಕಟ್ಟಡಗಳ ತೆರವು
ಬೆಳಗ್ಗೆ 6 ಗಂಟೆಯಿಂದಲೇ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಗೊಂಡಿತು. ಸುಮಾರು 86 ಹೆಚ್ಚು ಕಟ್ಟಡಗಳ ತೆರವು ಮಾಡಬೇಕಿದ್ದು, ಮೊದಲ ದಿನ 30ಕ್ಕೂ ಹೆಚ್ಚು ಕಟ್ಟಡಗಳು ತೆರವುಗೊಂಡವು. ಭಾನುವಾರವೂ ತೆರವು ಕಾರ್ಯಾಚರಣೆ ಮುಂದುವರೆಯಲಿದೆ. ಈ ಪೈಕಿ ಕೆಲ ಮಾಲೀಕರು ಸ್ವಯಂಪ್ರೇರಿತರಾಗಿ ತೆರವಿಗೆ ಮುಂದಾಗಿ ಸಹಕರಿಸುತ್ತಿದ್ದಾರೆ.
"
ಕಳೆದ 10 ವರ್ಷಗಳಿಂದ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಸಂಘ, ಸಂಸ್ಥೆಗಳು, ಸಾರ್ವಜನಿಕರು ಹೋರಾಟ ನಡೆಸಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆ ಇರುವ ಹಿನ್ನೆಲೆಯಲ್ಲಿ ದೊಡ್ಡ ರಸ್ತೆಯ ಅಗತ್ಯವಿದ್ದು, ಈ ಕುರಿತು ಎಲ್ಲ ಮಾಲೀಕರ ಮನವೊಲಿಸಿದ್ದೇವೆ. ಒಟ್ಟು 303 ಜನ ಮಾಲೀಕರ ಪೈಕಿ 86 ಜನ ಪರಿಹಾರ ಪಡೆದು 2-3 ತಿಂಗಳಾಗಿದೆ. 33 ಅಡಿ ರಸ್ತೆ ಕಾಮಗಾರಿ ಮಾಡಬೇಕಿದ್ದು, ಇನ್ನುಳಿದವರ ಸಹಕಾರದಿಂದ ರಸ್ತೆ ಕಾಮಗಾರಿ ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು.
- ಬಸವರಾಜ ಶಿವಣ್ಣನವರ ಶಾಸಕ
ಬ್ಯಾಡಗಿಯ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಕುರಿತು ಭೂಸ್ವಾಧೀನ ಪ್ರಕ್ರಿಯೆಗೆ ಕಾಯ್ದೆಯಂತೆ ಚಾಲನೆ ನೀಡಿದ್ದೇವೆ. 86ಕ್ಕೂ ಅಧಿಕ ಮಾಲೀಕರು ಪರಿಹಾರ ಪಡೆದುಕೊಂಡಿದ್ದಾರೆ. ಇನ್ನುಳಿದವರ ಪರಿಹಾರ ಹಣವನ್ನು ಜಿಲ್ಲಾ ನ್ಯಾಯಾಲಯ ಖಾತೆಗೆ ಜಮೆಮಾಡಿದ್ದು, ಉಳಿದವರು ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ. ಎಲ್ಲ ಸಾರ್ವಜನಿಕರು, ಆಸ್ತಿ ಮಾಲೀಕರು ರಸ್ತೆ ಕಾಮಗಾರಿಗೆ ಸಹಕಾರ ನೀಡುವಂತೆ ಕೋರಿದರು. ಡಾ.ವಿಜಯಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ